ನ್ಯೂಸ್

ಕಾರು ಹರಿದು ಆಮೆಯ ಚಿಪ್​ ಛಿದ್ರ! ಸೂಪರ್​ಗ್ಲೂ ಬಳಸಿ ಮೂಕಜೀವಿಗೆ ಮರುಜೀವ

ಲಖನೌ: ಕಾರು ಹರಿದು ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅಳಿವಿನಂಚಿನಲ್ಲಿರುವ ಮೂಕ ಜೀವಿ ಆಮೆಗೆ ಉತ್ತರ ಪ್ರದೇಶದ ರಾಯ್​ಬರೇಲಿಯಲ್ಲಿರುವ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (ಐವಿಆರ್​ಐ) ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮರುಜೀವ ನೀಡಿದೆ.

ಕಾರು ಹರಿದು ಛಿದ್ರ ಛಿದ್ರಗೊಂಡಿದ್ದ ಆಮೆಯ ಹೊದಿಕೆ ಅಥವಾ ಚಿಪ್ ಅನ್ನು ಸೂಪರ್​ಗ್ಲೂ ಮತ್ತು ಬ್ಲೌಸ್​ ಕ್ಲಾಸ್ಪ್​ ಬಳಸಿ ಮರುಜೋಡಿಸುವ ಮೂಲಕ ಆಮೆಗೆ ಮತ್ತೆ ಜೀವನ ನೀಡಲಾಗಿದೆ. ಮೂಳೆ ಶಸ್ತ್ರಚಿಕಿತ್ಸಕರು ಬಳಸುವ ಅಂಟು ಲಭ್ಯವಿಲ್ಲದ ಕಾರಣ ಮತ್ತು ಆಮೆಗೆ ಸಮಯ ಮೀರಿದ್ದರಿಂದ, ಚಿಪ್​ನಲ್ಲಿ ಉಂಟಾಗಿದ್ದ ಬಹು ಬಿರುಕುಗಳನ್ನು ಸರಿಪಡಿಸಲು ಸೂಪರ್‌ಗ್ಲೂ ಅನ್ನು ಪರ್ಯಾಯವಾಗಿ ಬಳಸಲಾಯಿತು.

ಡಾ ಅಭಿಜೀತ್ ಪಾವ್ಡೆ ಮತ್ತು ಡಾ ಕಮಲೇಶ್ ಕುಮಾರ್ ಮತ್ತು ಉನ್ನತ ಪಶುವೈದ್ಯಕೀಯ ಸಂಸ್ಥೆಯ ತಂಡದ ಇತರ ಸದಸ್ಯರು ಈ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸಿದರು. ಸದ್ಯ ಆಮೆಯನ್ನು ಬುಡೌನ್‌ನಲ್ಲಿರುವ ಪುನರ್ವಸತಿ ಕೇಂದ್ರದಲ್ಲಿ ನಿಗಾದಲ್ಲಿ ಇರಿಸಲಾಗಿದ್ದು, ಅದರ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಅಂದಹಾಗೆ ಭಾರತೀಯ ಫ್ಲಾಪ್‌ಶೆಲ್ ಆಮೆಯನ್ನು ಐಯುಸಿಎನ್​ (ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್) ವನ್ಯಜೀವಿ ಜಾತಿಗಳ ಕೆಂಪು ಪಟ್ಟಿಯಲ್ಲಿ ಅಳಿವಿನಂಚಿನಲ್ಲಿರುವ ಜೀವಿ ಎಂದು ಪಟ್ಟಿಮಾಡಿದೆ. ಅಪಘಾತಕ್ಕೊಳಗಾದ ಆಮೆ ಹೆಣ್ಣು ಆಮೆಯಾಗಿದ್ದು, ಅದರ ಹೊಟ್ಟೆಯೊಳಗೆ 7 ಮೊಟ್ಟೆಗಳಿದ್ದವು. ಹೀಗಾಗಿ ತಕ್ಷಣ ಆಪರೇಷನ್​ ಮಾಡಿ ಜೀವ ಉಳಿಸಲಾಗಿದೆ. (ಏಜೆನ್ಸೀಸ್​)