ಶಿವಮೊಗ್ಗ: ಶೃಂಗೇರಿ, ಕಿಗ್ಗ ಭಾಗದಲ್ಲಿ ಮಳೆ ಹೆಚ್ಚಾಗಿರುವ ಕಾರಣ ಗಾಜನೂರಿನ ತುಂಗಾ ಜಲಾಶಯಕ್ಕೆ ನೀರಿನ ಒಳಹರಿವು ಶನಿವಾರ ಸಂಜೆ ವೇಳೆಗೆ ಹೆಚ್ಚಾದ ಪರಿಣಾಮ ಜಲಾಶಯದ 21 ಗೇಟ್‌ಗಳನ್ನು ತೆರೆದು 46 ಸಾವಿರಕ್ಕೂ ಅಧಿಕ ನೀರನ್ನು ತುಂಗಾನದಿಗೆ ಹರಿಸಲಾಯಿತು.
ಮಧ್ಯಾಹ್ನವರೆಗೆ ತುಂಗಾ ಜಲಾಶಯಕ್ಕೆ 25ರಿಂದ 30 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗಿತ್ತು. ಸಂಜೆ ವೇಳೆಗೆ ಒಳಹರಿವು ಹೆಚ್ಚಾದ ಪರಿಣಾಮ ಮುನ್ನೆಚ್ಚರಿಕೆ ಕ್ರಮವಾಗಿ 47 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಯಿತು. ಇದರಿಂದ ಮೊದಲ ಬಾರಿಗೆ ಶಿವಮೊಗ್ಗದ ಕೋರ್ಪಲಯ್ಯನ ಛತ್ರ ಪೂರ್ತಿಯಾಗಿ ಮುಳುಗಡೆಯಾಗಿತ್ತು.
ಜಿಲ್ಲೆಯ ಹಲವೆಡೆ ಮಳೆ ಮುಂದುವರಿದಿದ್ದು ಭಾರಿ ಮಳೆ ಗಾಳಿಗೆ ಸಾಗರ, ತೀರ್ಥಹಳ್ಳಿ ಸೇರಿದಂತೆ ಕೆಲವೆಡೆ ಮರಗಳು ಬಿದ್ದು ಮನೆ, ವಾಹನಗಳು ಜಖಂಗೊಂಡಿವೆ.