ಬೆಂಗಳೂರು: ತುಂಗಭದ್ರಾ ನದಿ ನೀರಿನ ಹಂಚಿಕೆಯಲ್ಲಿ ಆಂಧ್ರಪ್ರದೇಶ ಕೋಟಾದಡಿ ಉಳಿಕೆ ಆಗುವ 4 ಟಿಎಂಸಿ ನೀರಿನ ಸದ್ಬಳಕೆಗೆ ಅವಕಾಶ ಕೋರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಗಿ ನೇತೃತ್ವದ ನಿಯೋಗವು ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಕರ್ನಾಟಕದಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ಬೆಳೆಗಳನ್ನು ನ.30ರವರೆಗೆ ಸಂರಕ್ಷಿಸಬೇಕಾಗಿದೆ. ಆದ್ದರಿಂದ ಆಂಧ್ರಪ್ರದೇಶದ ನದಿ ಸಹಾಯ ಕೋಟಾದಡಿ ಉಳಿಕೆಯಾಗಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಸಂಬಂಧ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಅವರೊಂದಿಗೆ ಮಾತನಾಡುವಂತೆ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವರು ಮನವಿ ಮಾಡಿದ್ದಾರೆ.
ಆಂಧ್ರಪ್ರದೇಶದ ಕೋಟಾದಡಿ 5 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಈ ಪೈಕಿ ಈಗಾಗಲೇ 1 ಟಿಎಂಸಿಯನ್ನು ನದಿಗೆ ಹರಿಸಲಾಗಿದೆ. ಉಳಿದ 4 ಟಿಎಂಸಿ ನೀರನ್ನು ಆರ್ಬಿಎಚ್ಎಲ್ಸಿ ಅಥವಾ ಕಾಲುವೆಗಳಿಗೆ ತಿರುಗಿಬಹುದೇ ಎಂಬುದರ ಬಗ್ಗೆ ಖಚಿತವಾಗಿಲ್ಲ. ಆದ್ದರಿಂದ ಈ ನೀರನ್ನು ಬಳಸಿಕೊಳ್ಳಲು ಅವಕಾಶ ನೀಡಿದರೆ ಅನುಕೂಲ ಆಗಲಿದೆ ಎಂದು ತಂಗಡಗಿ ಮನವಿ ಮಾಡಿದ್ದಾರೆ.
ಪ್ರಸ್ತುತ ಕರ್ನಾಟಕದ ಕೋಟಾದಡಿ ಹಂಚಿಕೆಯಾಗಿರುವ ನೀರಿನ ಪ್ರಮಾಣ 70.807 ಟಿಎಂಸಿಯಲ್ಲಿ ಕುಡಿಯುವ ನೀರಿಗಾಗಿ 10.71 ಟಿಎಂಸಿ ಕಾಯ್ದಿರಿಸಲಾಗಿದೆ. ನೀರಾವರಿಗಾಗಿ 60.097 ಟಿಎಂಸಿ ಬಳಸಬಹುದಾಗಿದೆ. ಅಕ್ಟೋಬರ್ 31ರವರೆಗೆ 51.243 ಟಿಎಂಸಿ ನೀರನ್ನು ಬಳಸಲಾಗಿದೆ. ನವೆಂಬರ್ 1 ರಿಂದ 11ರವರೆಗೆ ಬಳಕೆಯಾಗಬಹುದಾದ ನೀರಿನ ಪ್ರಮಾಣ 8.170 ಟಿಎಂಸಿ ಒಟ್ಟು ಬಳಕೆ ಆಗಬಹುದಾದ ನೀರಿನ ಪ್ರಮಾಣ 59.413 ಟಿಎಂಸಿ ಆಗಿದೆ. ಆದ್ದರಿಂದ ಉಳಿಕೆ ನೀರು ಬಳಸಿಕೊಳ್ಳಬಹುದು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜತೆಗೆ ಮಾತನಾಡುವುದಾಗಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.