ನ್ಯೂಸ್

ತುಂಗಭದ್ರಾ ಡ್ಯಾಂಗೆ ಗೇಟ್ ಯಶಸ್ವಿ ಅಳವಡಿಕೆ, ರೈತರ ಪರ ಧನ್ಯವಾದ ತಿಳಿಸಿದ ಸಿಎಂ, ಡಿಸಿಎಂ

Bengaluru - Political - Shivananda Tagadur

ಬೆಂಗಳೂರು:
ತುಂಗಭದ್ರಾ ಡ್ಯಾಂನ 19ನೇ ಗೇಟ್‌ಗೆ 4 ಅಡಿ ಎತ್ತರದ 5 ತಡೆ ಗೇಟುಗಳ ಯಶಸ್ವಿ ಅಳವಡಿಸಿದ್ದಕ್ಕೆ
ರಾಜ್ಯದ ಜನತೆ, ರೈತರ ಪರವಾಗಿ ಕನ್ನಯ್ಯ ನಾಯ್ಡು ಮತ್ತು ಅಧಿಕಾರಿಗಳು, ಎಂಜಿನಿಯರ್‌ಗಳು, ಸಿಬ್ಬಂದಿ, ಕಾರ್ಮಿಕರಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಧನ್ಯವಾದ ಸಲ್ಲಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೇಟ್ ಚೈನ್ ಲಿಂಕ್ ತುಂಡಾಗಿ ಹೋಗಿದ್ದರಿಂದ ಸುಮಾರು 35 ಟಿಎಂಸಿ ನೀರು ಕಳೆದುಕೊಳ್ಳಬೇಕಾಗಿ ಬಂದಿದ್ದು ನೋವಿನ ಸಂಗತಿ ಎಂದರು.
ಹರಿಯುವ ನೀರಿನ ನಡುವೆ ಹೇಗೆ ಗೇಟ್ ಅಳವಡಿಕೆ ಮಾಡುತ್ತಾರೆ ಎಂದು ಎಲ್ಲರೂ ಕುತೂಹಲದಿಂದ ನೋಡುತ್ತಿದ್ದರು. ನಮಗೂ ಇಷ್ಟು ಬೇಗ ಗೇಟ್ ಅಳವಡಿಸುತ್ತೇವೆ ಎನ್ನುವ ವಿಶ್ವಾಸ ಇರಲಿಲ್ಲ. ನಮ್ಮ ನಿರೀಕ್ಷೆ ಮೀರಿ ಬೇಗನೆ ಕೆಲಸ ಮಾಡಿದ ಇಡೀ ತಂಡಕ್ಕೆ ನಾಡು ಚಿರಋಣಿಯಾಗಿದೆ ಎಂದರು.
ಡ್ಯಾಂ ಗೇಟ್ ಡಿಸೈನ್ ಇದ್ದ ಕಾರಣ ಎಲ್ಲವೂ ಬೇಗ ಸಾಧ್ಯವಾಯಿತು. ತುರ್ತಾಗಿ ಗೇಟ್ ಸಿದ್ದಪಡಿಸಿದ ಜೆಎಸ್‌ಡಬ್ಲೂೃ, ಹಿಂದೂಸ್ಥಾನ್ ಇಂಜಿನೀಯರಿಂಗ್, ನಾರಾಯಣ ಇಂಜಿನೀಯರಿಂಗ್ ಅವರಿಗೂ ಧನ್ಯವಾದ ಎಂದರು.
ತುಂಗಭದ್ರ ಡ್ಯಾಂಗೆ ಈಗಲೂ 65 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದೆ. ಒಳ್ಳೆಯದಾಗುವ ಭರವಸೆ ಇದೆ ಎಂದರು.