ಜಗನ್ನಾಥ್ ಕಾಳೇನಹಳ್ಳಿ ತುಮಕೂರು
ಸ್ಮಾರ್ಟ್‌ಸಿಟಿ ತುಮಕೂರಿನಲ್ಲೂ ಪ್ರತಿನಿತ್ಯ ಟೋಯಿಂಗ್ ಕಿರಿಕಿರಿ ಇದ್ದಿದ್ದೆ. ನಗರದ ಪ್ರಮುಖ ರಸ್ತೆಗಳಲ್ಲಿ ‘ನೋ ಪಾರ್ಕಿಂಗ್’ ಫಲಕಗಳಿಲ್ಲದ ಸ್ಥಳಗಳಲ್ಲೂ ನಿಲ್ಲಿಸುವ ದ್ವಿಚಕ್ರವಾಹನಗಳನ್ನು ಟೋಯಿಂಗ್ ಸಿಬ್ಬಂದಿ ತುಂಬಿಕೊಂಡು ಹೋಗುವುದರಿಂದ ಪೊಲೀಸರ ಜತೆ ವಾಗ್ಯುದ್ಧ ಸಾಮಾನ್ಯ. ತುರ್ತು ಕೆಲಸದ ಸಂದರ್ಭದಲ್ಲಿ ರಸ್ತೆಯಲ್ಲಿ ನಿಲ್ಲಿಸಿರುವ ಬೈಕ್‌ಗಳನ್ನು ಟೋಯಿಂಗ್ ಸಿಬ್ಬಂದಿ ಎತ್ತೊಯ್ಯುವುದರಿಂದ ಬೇಸತ್ತಿರುವ ಜನ ಪೊಲೀಸರನ್ನು ಶಪಿಸುತ್ತಾರೆ.
ವಾಹನ, ಜನದಟ್ಟಣೆ ಪ್ರದೇಶಗಳಲ್ಲೇ ಪಾರ್ಕಿಂಗ್ ಅವ್ಯವಸ್ಥೆ ಜತೆಗೆ ಟೋಯಿಂಗ್ ಸಿಬ್ಬಂದಿ ವರ್ತನೆಗೆ ಬೇಸತ್ತಿರುವ ಬೆಂಗಳೂರಿಗರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ಮಧ್ಯಪ್ರವೇಶಿಸಿ ಜನರ ಕಿರಿಕಿರಿಗೆ ಬ್ರೇಕ್ ಹಾಕಲು ಟೋಯಿಂಗ್ ವ್ಯವಸ್ಥೆಯನ್ನು ಸದ್ಯಕ್ಕೆ ಹಿಂಪಡೆಯಲಾಗಿದೆ. ಅದೇ ರೀತಿ ರಾಜ್ಯದ ಇತರ ಮಹಾನಗರ ಪಾಲಿಕೆಗಳು ಇದೇ ಕಾನೂನು ಜಾರಿಯಾಗಬೇಕು. ಟೋಯಿಂಗ್ ವ್ಯವಸ್ಥೆ ಸುಧಾರಣೆ ತರುವವರೆಗೆ ಹಿಂಪಡೆಯಬೇಕೆಂಬುದು ವಾಹನ ಸವಾರರ ಒತ್ತಾಯವಾಗಿದೆ.
35-40 ವಾಹನ ಟಾರ್ಗೆಟ್: ತುಮಕೂರು ನಗರದಲ್ಲಿ 2021ರಲ್ಲಿ ಪ್ರಕಾಶ್ ಎಂಬ ಖಾಸಗಿ ವ್ಯಕ್ತಿ ಟೋಯಿಂಗ್ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದು, ಪ್ರತಿನಿತ್ಯ ಅನಧಿಕೃತ ಸ್ಥಳಗಳಲ್ಲಿ ನಿಲ್ಲುವ 35-40 ವಾಹನಗಳ ಟೋಯಿಂಗ್ ಮಾಡುವ ಟಾರ್ಗೆಟ್ ನೀಡಲಾಗಿದೆ. ಹಾಗಾಗಿ, ನೋ ಪಾರ್ಕಿಂಗ್ ಫಲಕ ಇರಲಿ, ಇಲ್ಲದಿರಲಿ ರಸ್ತೆಯಲ್ಲಿ ನಿಂತಿರುವ, ಮಾಲೀಕರು ಕಣ್ಣಿಗೆ ಬೀಳದೇ ಇದ್ದರೆ ಟೋಯಿಂಗ್ ಸಿಬ್ಬಂದಿ ಏಕಾಏಕಿ ದ್ವಿಚಕ್ರವಾಹನಗಳನ್ನು ತುಂಬಿಕೊಂಡು ಹೋಗಿಬಿಡುತ್ತಾರೆ. ಕೊನೆಗೆ ದಂಡ ಕಟ್ಟಿ ವಾಹನ ಬಿಡಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ತುಮಕೂರಿಗರು ನಿತ್ಯ ಎದುರಿಸುತ್ತಿದ್ದಾರೆ.
ಸ್ಮಾರ್ಟ್‌ಸಿಟಿ ಅಭಿವೃದ್ಧಿ ಕಾಮಗಾರಿಗಳಿಂದ ಹೈರಾಣಾಗಿರುವ ತುಮಕೂರಿಗರಿಗೆ ಸಂಚಾರಿ ಪೊಲೀಸರ ಕಿರುಕುಳ ತಪ್ಪಿದ್ದಲ್ಲ. ನಗರದ ವಾಣಿಜ್ಯ ಚಟುವಟಿಕೆ ಕೇಂದ್ರವಾದ ಎಂ.ಜಿ.ರಸ್ತೆಯಲ್ಲಿಲ್ಲಿಯೂ ನೋ ಪಾರ್ಕಿಂಗ್ ಫಲಕಗಳಿಲ್ಲ. ನಗರದಲ್ಲಿ ಹಾದು ಹೋಗಿರುವ ಬಿ.ಎಚ್.ರಸ್ತೆಯ ಎರಡೂ ಬದಿಗಳಲ್ಲೂ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಸರ್ವೀಸ್ ರಸ್ತೆಯಲ್ಲಿ ಎರ‌್ರಾಬಿರ‌್ರಿ ವಾಹನ ಓಡಾಟ. ಪಾದಚಾರಿಗಳ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾಗಿದೆ. ಟೋಯಿಂಗ್, ಕಾರುಗಳಿಗೆ ಹಾಕುವ ಕ್ಲಾಂಪ್ ಭೂತಕ್ಕೆ ಜನ ಹೆದರಿ ಓಡುವ ಸ್ಥಿತಿ ‘ಸಂಚಾರ ಅವ್ಯವಸ್ಥೆ’ಗೆ ಹಿಡಿದ ಕನ್ನಡಿ ಎನಿಸಿದೆ. ಟ್ರಾಫಿಕ್ ವ್ಯವಸ್ಥೆ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಾದ ಪೊಲೀಸ್ ಇಲಾಖೆ ಕುಂಭಕರ್ಣ ನಿದ್ರೆಗೆ ಜಾರಿರುವುದು ನಿಜಕ್ಕೂ ವಿಪರ್ಯಾಸವೆನಿಸಿದೆ.
ಎರ‌್ರಾಬಿರ‌್ರಿ ತುಂಬುವ ಸಿಬ್ಬಂದಿ!: ದ್ವಿಚಕ್ರವಾಹನಗಳನ್ನು ಎರ‌್ರಾಬಿರ‌್ರಿ ವಾಹನಕ್ಕೆ ತುಂಬುವಾರ ಡ್ಯಾಮೇಜ್ ಆಗಿರುವ ಉದಾಹರಣೆಗಳಿವೆ. ಸಾಲಸೋಲ ಮಾಡಿ ಖರೀದಿಸಿದ ಬೈಕ್‌ಗಳನ್ನು ಟೋಯಿಂಗ್ ಸಿಬ್ಬಂದಿ ಅನಾಮತ್ತು ಗಾಡಿಗೆ ತುಂಬುವ ವೇಳೆ ಹಾಳಾಗುತ್ತಿದ್ದು, ಈ ಬಗ್ಗೆ ಪ್ರಶ್ನಿಸಿದಾಗ ಪೊಲೀಸರು ಕೊಡುವ ಉಡಾಫೆ ಉತ್ತರಗಳಿಂದ ಜನ ರೋಸಿ ಹೋಗಿದ್ದಾರೆ.
ಸಬ್‌ರಿಜಿಸ್ಟ್ರಾರ್ ಕಚೇರಿ ಬಳಿ ಪರದಾಟ: ಚರ್ಚ್ ಸ್ಕ್ವೇರ್ ಕಡೆಯಿಂದ ಸಬ್‌ರಿಜಿಸ್ಟ್ರಾರ್ ಕಚೇರಿ, ಕೋರ್ಟ್ ಆವರಣದ ಸುತ್ತಮುತ್ತ ವಾಹನಗಳನ್ನು ನಿಲ್ಲಿಸುವುದು ಸವಾರರ ಪಾಲಿಗೆ ಸರ್ಕಸ್ ಎನಿಸಿದೆ. ಇನ್ನು ಸಬ್‌ರಿಜಿಸ್ಟ್ರಾರ್ ಕಚೇರಿ ರಸ್ತೆಯಲ್ಲೇ ತುಮಕೂರು ಗ್ರಾಮಾಂತರ ವೃತ್ತ ನಿರೀಕ್ಷಕರ ಕಚೇರಿ ಇರುವುದರಿಂದ ದ್ವಿಚಕ್ರವಾಹನ ಸವಾರರಿಗೆ ಟೋಯಿಂಗ್ ಭೂತ ಕಾಡುವುದು ನಿಶ್ಚಿತ. ಪಾಲಿಕೆಯಾಗಲಿ, ಪೊಲೀಸ್ ಇಲಾಖೆಯಾಗಲಿ ಜನರ ಪಾರ್ಕಿಂಗ್ ಸಮಸ್ಯೆಗೆ ಮಾತ್ರ ಸ್ಪಂದಿಸದೆ ಜಾಣ ಮೌನವಹಿಸಿವೆ.
ಕೆಲವು ಕಡೆಗಳಲ್ಲಿ ‘ನೋ ಪಾರ್ಕಿಂಗ್’ ಫಲಕವೇ ಇರುವುದಿಲ್ಲ. ಅಂತಹ ಕಡೆ ವಾಹನ ನಿಲ್ಲಿಸಿದ್ದರೂ ಟೋಯಿಂಗ್‌ನವರ ಕಿರಿಕಿರಿ ತಪ್ಪಲ್ಲ. ಇನ್ನೂ ‘ನೋ ಪಾರ್ಕಿಂಗ್’ಗಳಲ್ಲಿ ನಿಲ್ಲಿಸಿರುವ ವಾಹನಗಳನ್ನು ವಶಕ್ಕೆ ಪಡೆಯುವ ಮುನ್ನ ವಾಹನ ಸಾವರರಿಗೆ ಸೂಚನೆ ನೀಡುವ ನಿಯಮಗಳು ಪಾಲನೆಯಾಗುತ್ತಿಲ್ಲ. ಸಾರ್ವಜನಿಕರು, ಪೊಲೀಸರ ನಡುವೆ ನಿತ್ಯ ಗಲಾಟೆ ಇದ್ದೇ ಇರುತ್ತೆ. ಟೋಯಿಂಗ್ ಸಿಬ್ಬಂದಿಗೆ ಸೂಕ್ತ ನಿಯಮ ಪಾಲನೆ ಮಾಡಲು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿ ಹೇಳಬೇಕು. ಆಟೋ ಯಡಿಯೂರಪ್ಪ (ಕೆ.ಎಂ.ಶಿವಕುಮಾರ್) ಆಟೋ ಚಾಲಕ, ತುಮಕೂರು ಟೋಯಿಂಗ್ ವ್ಯವಸ್ಥೆ ಸುಧಾರಣೆ ಕೇವಲ ಬೆಂಗಳೂರಿಗೆ ಸೀಮಿತವಾಗಬಾರದು. ತಾತ್ಕಾಲಿಕವಾಗಿ ಟೋಯಿಂಗ್ ನಿಲ್ಲಿಸಲಾಗಿವೆ. ಎಲ್ಲಾ ಮಹಾನಗರ ಪಾಲಿಕೆಗಳಲ್ಲೂ ಖಾಸಗಿಯವರಿಗೆ ಟೋಯಿಂಗ್ ವ್ಯವಸ್ಥೆ ವಹಿಸಲಾಗಿದ್ದು ಇದರಿಂದ ಪ್ರತಿನಿತ್ಯ ಜನ ಕಿರಿಕಿರಿ ಅನುಭವಿಸುತ್ತಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆಯಲಾಗುವುದು. ಎಲ್.ರಮೇಶ್ ನಾಯ್ಕ, ಹೈಕೋರ್ಟ್ ವಕೀಲ, ತುಮಕೂರು