ತುಮಕೂರು: ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಬಂಧನಕ್ಕೆ ಒಳಗಾಗಿ ಬಿಡುಗಡೆಯಾಗಿದ್ದ ಮಹಿಳಾ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ಗೆ ಇದೀಗ ಮತ್ತೆ ಬಂಧನ ಭೀತಿ ಎದುರಾಗಿದೆ.
ಎಕ್ಸ್ ಖಾತೆಯಲ್ಲಿ ನಕಲಿ ಪೋಸ್ಟ್ ಹಂಚಿಕೊಂಡ ಆರೋಪದ ಮೇಲೆ ತುಮಕೂರಿನ ಜಯನಗರ ಠಾಣಾ ಪೊಲೀಸರು ಸುಮೋಟೋ ಕೇಸ್ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಬೆಂಗಳೂರಿನ ಲುಲು ಶಾಪಿಂಗ್ ಮಾಲ್‌ನಲ್ಲಿ ಭಾರತದ ಬಾವುಟಕ್ಕಿಂತ ಪಾಕಿಸ್ತಾನ ಬಾವುಟವನ್ನು ಎತ್ತರದಲ್ಲಿ ಹಾರಿಸಿದ್ದಾರೆ ಎಂದು ಪೋಟೋ ಜೊತೆಗೆ ಶಕುಂತಲಾ ನಟರಾಜ್ ಪೋಸ್ಟ್ ಹಂಚಿಕೊಂಡಿದ್ದಾರೆ.
ಇದಿಷ್ಟೇ ಅಲ್ಲದೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿರುವ ಶಕುಂತಲಾ, ಭಾರತದ ಬಾವುಟಕ್ಕಿಂತ ಬೇರೆ ಯಾವುದೇ ಬಾವುಟ ಎತ್ತರದಲ್ಲಿ ಇರಬಾರದು ಅನ್ನೋ ಸಾಮಾನ್ಯ ಜ್ಞಾನ ಇಲ್ಲವೇ? ನಿಮ್ಮ ಮಾಲ್ನವರಿಗೆ ಎಂದು ಪ್ರಶ್ನೆ ಮಾಡಿದ್ದಾರೆ. ಇದರ ಜತೆಗೆ ಬೆಂಗಳೂರಿನ ಲುಲು ಮಾಲ್ ಬಹಿಷ್ಕರಿಸಿ ಎಂದು ಹ್ಯಾಷ್ಟ್ಯಾಗ್ ಉಪಯೋಗಿಸಿದ್ದಾರೆ. ಅ. 10ರಂದು ಪೋಸ್ಟ್ ಮಾಡಿದ್ದಾರೆ.
ಆದರೆ, ಶಕುಂತಲಾ ಪೋಸ್ಟ್ ಎಷ್ಟು ಸತ್ಯ ಎಂಬುದನ್ನು ತಿಳಿದುಕೊಳ್ಳಲು ಅದರ ಮೂಲ ಹುಡುಕಿ ಫ್ಯಾಕ್ಟ್ ಚೆಕ್ ಮಾಡಿದ ಪೊಲೀಸರಿಗೆ ನಕಲಿ ಪೋಸ್ಟ್ ಎಂಬುದು ಗೊತ್ತಾಗಿದೆ. ಪೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುವುದು ಬೆಳಕಿಗೆ ಬಂದಿದೆ.
ನಕಲಿ ಪೋಸ್ಟ್ ಮೂಲಕ ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದ್ದಾರೆಂಬ ಆರೋಪದಡಿ ಶಕುಂತಲಾ ನಟರಾಜ್ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 153 (ಬಿ) ಅಡಿಯಲ್ಲಿ ಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹಿಂದೆಯೂ ಬಂಧನವಾಗಿತ್ತು
ಇತ್ತೀಚೆಗಷ್ಟೇ ಶಕುಂತಲಾ ನಟರಾಜ್ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಈ ಪ್ರಕರಣದಲ್ಲಿ ಆಕೆಯನ್ನು ಬಂಧಿಸಿ, ಜಾಮೀನನ ಮೇಲೆ ಬಿಡುಗಡೆ ಮಾಡಲಾಗಿದೆ.