ತುಮಕೂರು: ಸಿದ್ಧಗಂಗಾ ಮಠದ ಗೋ ಕಟ್ಟೆಯಲ್ಲಿ ಇಂದು ಸಂಭವಿಸಿದ್ದ ದುರಂತದಲ್ಲಿ ನಾಲ್ವರು ಸಾವಿಗೀಡಾಗಿದ್ದು, ಇಬ್ಬರ ಶವ ಪತ್ತೆಯಾಗಿದೆ. ಆದರೆ ಇನ್ನಿಬ್ಬರಿಗಾಗಿ ಗಂಟೆಗಟ್ಟಲೆ ಹುಡುಕಾಟ ನಡೆಸಿದರೂ ಅವರ ಸುಳಿವು ಸಿಗಲಿಲ್ಲ.
ಆಪತ್ತಿಗೆ ಸಿಕ್ಕಿದ ಮಗನನ್ನು ರಕ್ಷಿಸಲು ಧುಮುಕಿದ್ದ ತಾಯಿ ಸೇರಿ ನಾಲ್ವರು ನೀರಿನಲ್ಲಿ ಮುಳುಗಿದ್ದು, ಆ ಪೈಕಿ ಇಬ್ಬರ ಶವ ಸಿಕ್ಕಿದೆ. ಸಿದ್ಧಗಂಗಾ ಮಠದಲ್ಲಿ ನೆಲೆಸಿ ವ್ಯಾಸಂಗ ಮಾಡುತ್ತಿದ್ದ ರಂಜಿತ್ ಆಪತ್ತಿಗೆ ಸಿಕ್ಕಿದ್ದ ವಿದ್ಯಾರ್ಥಿ. ಭಾನುವಾರ ರಜೆ ಕಾರಣ ತಾಯಿ ನೋಡಲು ಬಂದಿದ್ದಾಗ ಈ ಪ್ರಕರಣ ನಡೆದಿತ್ತು.
ಮಧ್ಯಾಹ್ನ ಊಟದ ಬಳಿಕ ರಂಜಿತ್ ಮತ್ತು ಸ್ನೇಹಿತರಾದ ಶಂಕರ್, ಹರ್ಷಿತ್, ರಂಜಿತ್ ತಾಯಿ ಲಕ್ಷ್ಮೀ ಹಾಗೂ ಸಹೋದರಿ ಎಲ್ಲರೂ ಸಿದ್ಧಗಂಗಾ ಮಠದ ಗೋ ಕಟ್ಟೆ ಬಳಿ ಜೊತೆಗೇ ಊಟ ಮಾಡಿದ್ದರು. ಊಟದ ಬಳಿಕ ಕೈ ತೊಳೆಯಲು ರಂಜಿತ್ ಗೋ ಕಟ್ಟೆಗೆ ತೆರಳಿದ್ದ. ಆಗ ಆತ ಅಲ್ಲಿ ನೀರಿನಲ್ಲಿ ಕಾಲು ಜಾರಿ ಬಿದ್ದಿದ್ದ. ರಂಜಿತ್ನನ್ನು ರಕ್ಷಿಸಲು ಹರ್ಷಿತ್, ಶಂಕರ್ ನೀರಿಗೆ ಹಾರಿದ್ದರು. ಆ ಮೂವರಿಗೆ ಅಪಾಯ ಆಗುವ ಸಾಧ್ಯತೆ ಇದ್ದಿದ್ದರಿಂದ ರಂಜಿತ್ ತಾಯಿ ಲಕ್ಷ್ಮೀ ಹಾಗೂ ಇನ್ನೊಬ್ಬ ಪಾಲಕ ಮಹದೇವಪ್ಪ ಕೂಡ ನೀರಿಗೆ ಧುಮುಕಿದ್ದರು.
ಆದರೆ ಮೊದಲಿಗೆ ಅಪಾಯಕ್ಕೆ ಸಿಲುಕಿದ್ದ ರಂಜಿತ್ ಪ್ರಾಣಾಪಾಯದಿಂದ ಪಾರಾಗಿದ್ದು, ಉಳಿದ ಮೂವರು ನೀರಿನಲ್ಲಿ ಮುಳುಗಿ ಸಾವಿಗೀಡಾದರು. ಲಕ್ಷ್ಮೀ ಹಾಗೂ ಹರ್ಷಿತ್ ಮೃತದೇಹವನ್ನು ಹೊರ ತೆಗೆದಿರುವ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸತತ ಆರು ಗಂಟೆಗಳಿಂದ ಶೋಧಕಾರ್ಯ ನಡೆಸಿದರೂ ಮಹದೇವಪ್ಪ ಹಾಗೂ ಶಂಕರ್ ಸುಳಿವು ಸಿಕ್ಕಿಲ್ಲ. ಮೂರು ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ರಾತ್ರಿಯಾದ್ದರಿಂದ ಶೋಧಕಾರ್ಯ ಸ್ಥಗಿತಗೊಳಿಸಲಾಗಿದೆ. ನಾಳೆ ಬೆಳಗ್ಗೆ 6 ಗಂಟೆಗೆ ಮತ್ತೆ ಶೋಧಕಾರ್ಯ ಆರಂಭವಾಗಲಿದೆ.