* ಸೆ. 27ಕ್ಕೆ ಸಚಿವ ಸೋಮಣ್ಣ ಹಸಿರು ನಿಶಾನೆ
ತುಮಕೂರು : ತುಮಕೂರು-& ಬೆಂಗಳೂರು ನಡುವೆ ಹೊಸ ಮೆಮು ರೈಲು ಸಂಚಾರಕ್ಕೆ ಸೆ.27 ರಂದು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ನಗರ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಲಿದ್ದಾರೆ.
ತುಮಕೂರು-ಯಶವಂತಪುರ ನಡುವೆ ಮೆಮು ರೈಲು ಸಂಚಾರ ಆರಂಭಿಸಲಿದ್ದು, ಭಾನುವಾರ ಹೊರತುಪಡಿಸಿ ಪ್ರತಿದಿನ ತುಮಕೂರಿನಿಂದ ಬೆಳಗ್ಗೆ 8.45ಕ್ಕೆ ಹೊರಟು 10.25ಕ್ಕೆ ಯಶವಂತಪುರ ತಲುಪಲಿದೆ. ಸಂಜೆ 5.40ಕ್ಕೆ ಯಶವಂತಪುರದಿಂದ ಹೊರಟು 7.05 ಕ್ಕೆ ತುಮಕೂರು ತಲುಪಲಿದೆ. ಈ ರೈಲು ಸಂಚಾರದಿಂದ ಸಂಜೆ ವೇಳೆ ಅರಸೀಕೆರೆ ಪ್ಯಾಸೆಂಜರ್ಗಿಂತ ಮುಂಚೆ ಇನ್ನೊಂದು ರೈಲು ಸಂಚಾರ ಆರಂಭಿಸಬೇಕೆಂಬ ಪ್ರಯಾಣಿಕರ ಮನವಿಗೆ ಸಚಿವ ಸೋಮಣ್ಣ ಅವರು ಸ್ಪಂದಿಸಿ ಅನುಕೂಲ ಕಲ್ಪಿಸಿದ್ದಾರೆ. ಈ ರೈಲು ತುಮಕೂರು ಯಶವಂತಪುರ ಮಧ್ಯೆ ಬರುವ ಎಲ್ಲ ನಿಲ್ದಾಣಗಳಲ್ಲೂ ನಿಲ್ಲಲಿದೆ.
ಇದಲ್ಲದೆ, ಪ್ರತಿ ಸೋಮವಾರ (ವಾರಕ್ಕೊಮ್ಮೆ) ಬಾಣಸವಾಡಿಯಿಂದ ಬೆಳಗ್ಗೆ 6.15ಕ್ಕೆ ಮತ್ತೊಂದು ಮೆಮು ಸಂಚಾರ ಆರಂಭವಾಗಲಿದ್ದು ಯಶವಂತಪುರ ಬೈಪಾಸ್ ಮಾಡಿ (ಯಶವಂತಪುರದ ಮೂಲಕ ಅಲ್ಲ) ಚಿಕ್ಕಬಾಣಾವರದ ಮೂಲಕ ಬೆಳಗ್ಗೆ 8.35ಕ್ಕೆ ತುಮಕೂರು ತಲುಪಲಿದೆ. ಅಲ್ಲದೆ, ಪ್ರತಿ ಶನಿವಾರ (ವಾರಕ್ಕೊಮ್ಮೆ) ರಾತ್ರಿ 7.40 ಕ್ಕೆ ತುಮಕೂರಿನಿಂದ ಹೊರಟು ರಾತ್ರಿ 10.05ಕ್ಕೆ ಬಾಣಸವಾಡಿ ತಲುಪಲಿದೆ.
ಕಳೆದ ತಿಂಗಳಷ್ಟೇ ವಂದೇ ಭಾರತ್ ರೈಲಿಗೆ ತುಮಕೂರಿನಲ್ಲಿ ನಿಲುಗಡೆ ಕಲ್ಪಿಸಿಕೊಟ್ಟಿದ್ದ ಸಚಿವ ಸೋಮಣ್ಣ ಇದೀಗ ತುಮಕೂರು ಜಿಲ್ಲೆಯ ರೈಲು ಪ್ರಯಾಣಿಕರಿಗೆ ಮತ್ತೊಂದು ಮಹತ್ತರ ಕೊಡುಗೆ ನೀಡಿದ್ದಾರೆ. ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವ ಸಚಿವರಿಗೆ ವಿಶೇಷವಾಗಿ ರೈಲು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತಿರುವುದಕ್ಕೆ ತುಮಕೂರು&ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ಕೃತಜ್ಞತೆ ಸಲ್ಲಿಸಿದೆ ಎಂದು ವೇದಿಕೆ ಕಾರ್ಯದರ್ಶಿ ಕರಣಂರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.