ನ್ಯೂಸ್

ತುಮಕೂರು: ಗೌರಿ ಹಬ್ಬಕ್ಕೆ ಪೂಜೆಗೆ ತೆರಳಿದ್ದ ವೇಳೆ ಹಾವು ಕಡಿದು ಬಾಲಕಿ ಸಾವು

ತುಮಕೂರು: ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪೋಷಕರೊಂದಿಗೆ ದೇವಸ್ಥಾನಕ್ಕೆ ತೆರಳಿದ್ದ ಬಾಲಕಿ ಹಾವು ಕಡಿತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಕುಣಿಗಲ್ ಪಟ್ಟಣದ 22 ನೇ ವಾರ್ಡ್ ನಲ್ಲಿ ನಡೆದಿದೆ.

ಸ್ಪಂದನ (13), ಮೃತ ಬಾಲಕಿ. ಈಕೆ 22ನೇ ವಾರ್ಡ್‌ನ ಮಲ್ಲಿಪಾಳ್ಯದಲ್ಲಿ ವಾಸವಾಗಿರುವ ಪುರಸಭೆ ವಾಟರ್ ಮ್ಯಾನ್ ಕುಮಾರ್ ಮಗಳು ಎನ್ನಲಾಗಿದೆ. ಮೃ ಬಾಲಕಿ ಕುಣಿಗಲ್ ಪಟ್ಟಣದ ಖಾಸಗಿ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದಳು.

ಇಂದು ಗೌರಿ-ಗಣೇಶ ಹಬ್ಬ ಹಿನ್ನಲೆಯಲ್ಲಿ ಕುಟುಂಬದವರ ಜೊತೆ ಕುಣಿಗಲ್ ಪಟ್ಟಣದ ಮುಳಕಟ್ಟಮ್ಮ ದೇವಸ್ಥಾನಕ್ಕೆ ತೆರಳಿದ್ದ ಬಾಲಕಿ, ದೇವಾಲಯದ ಆವರಣದಲ್ಲಿದ್ದ ವಿಶ್ರಾಂತಿ ಪಡೆಯುವ ಚೇರ್ ಮೇಲೆ ಕುಳಿತಿದ್ದಾಗ ಹಾವು ಕಡಿತಕ್ಕೆ ಒಳಗಾಗಿದ್ದಾಳೆ.

ಹಾವು ಕಡಿದಿದ್ದನ್ನ ಗಮನಿಸದ ಬಾಲಕಿ, ಪೂಜೆ ಮುಗಿಸಿಕೊಂಡು ಕುಟುಂಬದವರೊಂದಿಗೆ ಮನೆಗೆ ಬಂದ ಬಾಲಕಿ, ಕೆಲಕಾಲ ಆಟ ಆಡಿದ್ದಾಳೆ. ನಂತರ ತೀವ್ರ ಅಸ್ವಸ್ಥಗೊಂಡು ಕೆಳಗೆ ಬಿದ್ದಿದ್ದಾಳೆ. ಮನೆಯವರು ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ. ಬಾಲಕಿ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.