ನ್ಯೂಸ್

ಪುತ್ತೂರಿನಲ್ಲಿ ತುಳುನಾಡ ಬಂಟೆರ ಪರ್ಬ 2023 ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ

Mangaluru - Nishantha Narayana

ಪುತ್ತೂರು: ಯುವ ಬಂಟರ ಸಂಘ ಪುತ್ತೂರು ತಾಲೂಕು ಸಮಿತಿ ಆಶ್ರಯದಲ್ಲಿ ಬಂಟ ದಿನಾಚರಣೆಯ ಪ್ರಯುಕ್ತ ಜು.23 ರಂದು ತುಳುನಾಡ ಬಂಟೆರ ಪರ್ಬ 2023 ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಜಿಲ್ಲೆಯ ಆಯ್ದ 8 ತಂಡಗಳು ಭಾಗವಹಿಸಲಿದ್ದು, ತುಳುನಾಡು ಮತ್ತು ಬಂಟ ಸಂಸ್ಕೃತಿಯ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಮೂರು ಮಂದಿ ಹಿರಿಯ ಬಂಟ ಚೇತನಗಳ ಸ್ಮೃತಿ ಕಾರ್ಯಕ್ರಮ ಈ ಸಂದರ್ಭ ನಡೆಯಲಿದೆ ಎಂದು ಕಾರ್ಯಕಾರಿ ಸಮಿತಿ ಅಧ್ಯಕ್ಷ ಮುಂಡಾಳಗುತ್ತು ಶಶಿರಾಜ್ ರೈ ಹೇಳಿದರು.

ಕಳೆದ 10 ವರ್ಷಗಳಿಂದ ಬಂಟರ ದಿನಾಚರಣೆಯನ್ನು ಗಣಪತಿ ಹವನ, ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ನಡೆಸಿಕೊಂಡು ಬರಲಾಗಿತ್ತಿದ್ದು, ಈ ಬಾರಿ ಬದಲಾವಣೆಯನ್ನು ಮಾಡಿ ಪುತ್ತೂರು ಬಂಟರ ಭವನದಲ್ಲಿ ಜು.22ರಂದು ಬೆಳಗ್ಗೆ ಗಣಪತಿ ಹವನ ಹಾಗೂ ಸತ್ಯನಾರಾಯಣ ಪೂಜೆ ನಡೆಯಲಿದೆ. ಜು.23ರಂದು ಬೆಳಗ್ಗೆ 9ರಿಂದ ಸಾಯಂಕಾಲ 5ರವರೆಗೆ ಸಂಪೂರ್ಣ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ರೈ ಮಾಲಾಡಿ ನಡೆಸಲಿದ್ದಾರೆ ಎಂದು ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.

ನಿವೃತ್ತ ತಹಸೀಲ್ದಾರ್ ಚಿಲ್ಮೆತ್ತಾರ್ ಕೋಚಣ್ಣ ರೈ, ಜಯಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾಗಿದ್ದ ಡಾ. ಮುಂಡಾಳಗುತ್ತು ತಿಮ್ಮಪ್ಪ ರೈ ಅವರ ಕುಟುಂಬಸ್ಥರ ಉಪಸ್ಥಿತಿಯಲ್ಲಿ ಸ್ಮೃತಿ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಉಚ್ಛನ್ಯಾಯಾಲಯದ ನ್ಯಾಯಾಧೀಶ ಸವಣೂರು ವಿಶ್ವಜೀತ್ ಶೆಟ್ಟಿ ಅವರಿಗೆ ಗೌರವ ಪ್ರಧಾನ ನಡೆಯಲಿದೆ. ಎಸ್. ಎಸ್. ಎಲ್. ಸಿ. ಹಾಗೂ ಪಿ.ಯು.ಸಿ. ಅಲ್ಲಿ ವಿಶೇಷ ಸಾಧನೆ ಮಾಡಿದ ಮೂರು ಮಂದಿ ಬಡ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಮಾಡಲಿದ್ದೇವೆ ಎಂದರು.

ಕಾರ್ಯಕ್ರಮ ಸಂಚಾಲಕರಾದ ಭಾಗ್ಯೇಶ್ ರೈ ಕೆಯ್ಯೂರು, ಹರ್ಷ ಕುಮಾರ್ ರೈ ಮಾಡವು, ಪ್ರಧಾನ ಕಾರ್ಯದರ್ಶಿ ರಂಜಿನಿ ಶೆಟ್ಟಿ, ಉಪಾಧ್ಯಕ್ಷ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಸದಸ್ಯತನ ಸಂಯೋಜಕ ರವಿಪ್ರಸಾದ್ ಶೆಟ್ಟಿ ಬೊಳಿಂಜಗುತ್ತು ಉಪಸ್ಥಿತರಿದ್ದರು.