ನ್ಯೂಸ್

ಬಾಲಕಿ ಅಪಹರಿಸಿದ ಟ್ಯೂಷನ್ ಶಿಕ್ಷಕ

ಬೆಂಗಳೂರು: ಪ್ರೀತಿ-ಪ್ರೇಮದ ಹೆಸರಿನಲ್ಲಿ ೧೫ ವರ್ಷದ ಬಾಲಕಿಯನ್ನು ಟ್ಯೂಷನ್ ಶಿಕ್ಷಕನೇ ಅಪಹರಣ ಮಾಡಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನ.೨೩ರಂದು ಘಟನೆ ಈ ಘಟನೆ ನಡೆದಿದೆ.

ಕನಕಪುರ ಮೂಲದ ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಜೆ.ಪಿ.ನಗರ ೧ನೇ ಹಂತದ ಅಭಿಷೇಕ್ ಗೌಡ(೩೦) ಎಂಬಾತನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಅಭಿಷೇಕ್ ಗೌಡ ಮತ್ತು ಬಾಲಕಿಯ ಪತ್ತೆಗಾಗಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರುದಾರ ಬಾಲಕಿ ತಂದೆ ರಾಮನಗರ ಜಿಲ್ಲೆ ಕನಕಪುರ ಮೂಲದವರು. ಇವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬನಶಂಕರಿ ೨ನೇ ಹಂತದ ನೆಲೆಸಿದ್ದಾರೆ. ಇವರ ಎರಡನೇ ಮಗಳು ಯಲಚೇನಹಳ್ಳಿಯ ಖಾಸಗಿ ಶಾಲೆಯಲ್ಲಿ ಎಸ್ಸೆಸ್ಸೆಎಲ್ಸಿ ವ್ಯಾಸಂಗ ಮಾಡುತ್ತಿದ್ದಳು. ಜೆ.ಪಿ.ನಗರ ೧ನೇ ಹಂತದ ಆಂಜನೇಯ ದೇವಸ್ಥಾನದ ಬಳಿ ಅಭಿಷೇಕ್ ಗೌಡ ಎಂಬಾತನ ಬಳಿ ಟ್ಯೂಷನ್‌ಗೆ ಹೋಗುತ್ತಿದ್ದಳು. ಪ್ರತಿ ದಿನ ಸಂಜೆ ೫ ಗಂಟೆಗೆ ಹೋಗಿ ರಾತ್ರಿ ೮.೩೦ಕ್ಕೆ ಮನೆಗೆ ಬರುತ್ತಿದ್ದಳು. ಇದೇ ರೀತಿ ನ.೨೩ರಂದು ಮಧ್ಯಾಹ್ನ ೩.೩೦ಕ್ಕೆ ಸಹೋದರ ಬಾಲಕಿಯನ್ನು ಟ್ಯೂಷನ್‌ಗೆ ಬಿಟ್ಟು ಬಂದಿದ್ದಾನೆ. ಸಂಜೆ ೭ ಗಂಟೆಯಾದರೂ ಆಕೆ ಮನೆಗೆ ವಾಪಾಸ್ ಬಾರದ ಕಾರಣ ಪಾಲಕರು ಟ್ಯೂಷನ್ ಬಳಿ ತೆರಳಿ ವಿಚಾರ ಮಾಡಿದ್ದಾರೆ. ಈ ವೇಳೆ ಶಿಕ್ಷಕ ಅಭಿಷೇಕ್ ಗೌಡ ಮನೆ ಬೀಗ ಹಾಕಿರುವುದು ಕಂಡು ಬಂದಿದೆ. ಆ ಕಟ್ಟಡದ ಮನೆಯೊಂದರಲ್ಲಿದ್ದ ಪರಿಚಿತ ಯುವತಿಯನ್ನು ವಿಚಾರ ಮಾಡಿದಾಗ, ಅಭಿಷೇಕ್ ಗೌಡ ನಾನು ಬರುವುದು ತಡವಾದರೆ, ಮನೆಗೆ ಬೀಗ ಹಾಕಿ ಕೀ ಅನ್ನು ನೀವೇ ಇರಿಸಿಕೊಳ್ಳುವಂತೆ ಹೇಳಿದ್ದರು. ಹೀಗಾಗಿ ಅವರ ಮನೆಗೆ ಬೀಗ ಹಾಕಿದ್ದೇನೆ ಎಂದು ತಿಳಿಸಿದ್ದಾಳೆ.