ನ್ಯೂಸ್

ಹೋಮ್​ವರ್ಕ್​ ಮಾಡದ ವಿದ್ಯಾರ್ಥಿಗೆ ಮನಸೋ ಇಚ್ಛೆ ಥಳಿಸಿದ ಶಿಕ್ಷಕಿ! Home work

ಮುಂಬೈ: ದೀಪಾವಳಿ ರಜೆಯ ಸಮಯದಲ್ಲಿ ನೀಡಿದ್ದ ಹೋಮ್​ವರ್ಕ್​ನ್ನು (Home work) ಪೂರ್ಣಗೊಳಿಸದ ಕಾರಣ ಟ್ಯೂಷನ್​ ಶಿಕ್ಷಕಿಯೊಬ್ಬರು 8 ನೇ ತರಗತಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದು, ಈ ಆರೋಪದಡಿ ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಮುಂಬೈನಲ್ಲಿ ಇತ್ತೀಚೆಗೆ ನಡೆದಿದೆ.

ಘಟನೆ ಏನು?

ಆರೋಪಿ ಲಕ್ಷ್ಮಿ ದೀಪಕ್ ಖಡ್ಕಾ ಎಂದು ತಿಳಿದುಬಂದಿದೆ. ರಜೆಯ ಸಮಯದಲ್ಲಿ ಹೋಮ್​ವರ್ಕ್​ ಮಾಡದ ಕಾರಣ, 8 ನೇ ತರಗತಿ ವಿದ್ಯಾರ್ಥಿಗೆ ಮರದ ಕೋಲಿನಿಂದ ಶಿಕ್ಷಕಿಯು ಹೊಡೆದಿದ್ದಾಳೆ. ನಂತರ ಬಾಲಕಿ ಮನೆಗೆ ಹಿಂತಿರುಗಿದಾಗ ಕೈಗಳಲ್ಲಿ ಗೋಚರ ಗಾಯಗಳಾಗಿದ್ದವು ಎಂದು ಸ್ಥಳೀಯ ಸುದ್ಧಿ ಮೂಲಗಳು ವರದಿ ಮಾಡಿವೆ.

ತಂದೆಯು ಮಗಳ ಕೈಗಳನ್ನು ನೋಡಿ ವಿಚಾರಣೆ ನಡೆಸಿದಾಗ ರಜೆಯಲ್ಲಿ ನೀಡಿದ್ದ ಹೋಮ್​ವರ್ಕ್​ ಪೂರ್ಣಗೊಳಿಸದ ಕಾರಣ ಶಿಕ್ಷಕಿ ಹೊಡೆದಿದ್ದಾಳೆ ಎಂದು ಆರೋಪಿಸಿದ್ದಾಳೆ. ಘಟನೆಯಿಂದ ಕೋಪಗೊಂಡ ತಂದೆಯು ಘಾಟ್ಕೋಪರ್ ಪೊಲೀಸ್​ ಠಾಣೆಯಲ್ಲಿ ಶಿಕ್ಷಕಿ ವಿರುದ್ಧ ದೂರು ನೀಡಿದ್ದಾರೆ.

ಶಿಕ್ಷಕಿ ವಿರುದ್ಧ ಎಫ್​ಐಆರ್​ ದಾಖಲು

ತಂದೆ ನೀಡಿದ ದೂರಿನ ಆಧಾರದ ಮೇಲೆ ಶಿಕ್ಷಕನ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಸನ್​ 118(1) ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇದು ಅಪಾಯಕಾರಿ ಆಯುಧಗಳು ಅಥವಾ ಸ್ವಯಂಪ್ರೇರಣೆಯಿಂದ ಗಂಭೀರ ಗಾಯವುಂಟು ಮಾಡುವ ಬಗ್ಗೆ ವ್ಯವಹರಿಸುತ್ತದೆ ಎಂದು ತಿಳಿಸಲಾಗಿದೆ.

ವಿಚಾರಣೆಗೆ ಶಿಕ್ಷಕಿಗೆ ಸಮನ್ಸ್ ಜಾರಿ

ಕಾನೂನು ವಿಧಾನದ ಪ್ರಕಾರ ಶಿಕ್ಷಕಿಗೆ ನೋಟಿಸ್ ನೀಡಲಾಗಿದೆ ಮತ್ತು ಶೀಘ್ರದಲ್ಲೇ ವಿಚಾರಣೆಗೆ ಕರೆಸಲಾಗುವುದು ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್ ಜಾಧವ್ ದೃಢಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಈಗಾಗಲೇ ಬಾಲಕಿಯ ಹೇಳಿಕೆಯನ್ನು ದಾಖಲಿಸಿದ್ದೇವೆ. ಹಾಗೆಯೇ ತರಗತಿಯ ಸಮಯದಲ್ಲಿ ಹಾಜರಿದ್ದ ಇತರ ವಿದ್ಯಾರ್ಥಿಗಳನ್ನು ತನಿಖೆ ನಡೆಸಲಿದ್ದೇವೆ. ಪ್ರಾಥಮಿಕ ತನಿಖೆಯಲ್ಲಿ ಬಾಲಕಿಯ ಕೈಗೆ ಮರದ ಕೋಲಿನಿಂದ ಹೊಡೆದ್ದರಿಂದ ಗಾಯಗಳಾಗಿವೆ ಎಂದು ಜಾಧವ್​​ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್​)