ನ್ಯೂಸ್

ರಷ್ಯಾ ಬೆನ್ನಲ್ಲೇ ಜಪಾನ್​ಗೂ ಅಪ್ಪಳಿಸಿದ ಸುನಾಮಿ: 2011ರ ಬಳಿಕ ಪೆಸಿಫಿಕ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪ! Tsunami Hits Russia, Japan

Tsunami Hits Russia, Japan : ರಷ್ಯಾದ ಫಾರ್​ ಈಸ್ಟರ್ನ್​ನಲ್ಲಿ ಬುಧವಾರ (ಜುಲೈ 30) ಮುಂಜಾನೆ 8.8 ತೀವ್ರತೆಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಇದರ ಪರಿಣಾಮವಾಗಿ ಉತ್ತರ ಪೆಸಿಫಿಕ್ ಪ್ರದೇಶದಲ್ಲಿ ಸುನಾಮಿ ಎದ್ದಿದೆ. ವಿಶ್ವದ ಪ್ರಬಲ ಭೂಕಂಪಗಳಲ್ಲಿ ಇದು ಕೂಡ ಒಂದಾಗಿದ್ದು, ಈಗಾಗಲೇ ರಷ್ಯಾ ಮತ್ತು ಜಪಾನ್​ಗೆ ಸುನಾಮಿ ಬಂದಪ್ಪಳಿಸಿದೆ. ಈ ಹಿನ್ನೆಲೆಯಲ್ಲಿ ಅಲಾಸ್ಕಾ, ಹವಾಯಿ ಮತ್ತು ನ್ಯೂಜಿಲೆಂಡ್ ಕಡೆಗೆ ದಕ್ಷಿಣಕ್ಕೆ ಇರುವ ಇತರ ಕರಾವಳಿಗಳಿಗೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ.

ಅಮೆರಿಕದ ಹವಾಯಿ ರಾಜ್ಯದ ಹೊನೊಲುಲು ನಗರದಲ್ಲಿ ಮಂಗಳವಾರ ಸುನಾಮಿ ಎಚ್ಚರಿಕೆ ಸೈರನ್‌ಗಳು ಮೊಳಗಿದ್ದು, ಜನರನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಇತ್ತ ಜಪಾನ್​ಗೆ ಸುನಾಮಿ ಅಪ್ಪಳಿಸಿದೆ. ದೇಶದ ಪ್ರಮುಖ ದ್ವೀಪಗಳ ಉತ್ತರದ ತುದಿಯಲ್ಲಿರುವ ಹೊಕ್ಕೈಡೊದ ದಕ್ಷಿಣ ಕರಾವಳಿಯಲ್ಲಿರುವ ಟೊಕಾಚಿಯಲ್ಲಿ 40 ಸೆಂಟಿಮೀಟರ್ (1.3 ಅಡಿ) ಅಳತೆಯ ಸುನಾಮಿ ಪತ್ತೆಯಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.

ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಭೂಕಂಪದ ಕೇಂದ್ರಬಿಂದುವಿಗೆ ಸಮೀಪವಿರುವ ರಷ್ಯಾದ ಇನ್ನಿತರ ಪ್ರದೇಶಗಳು ಹಾನಿಯಾಗಿದ್ದು, ಈಗಾಗಲೇ ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ. ಈವರೆಗೂ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. ಅಂದಹಾಗೆ, ಪೆಸಿಫಿಕ್‌ ಸಾಗರದಲ್ಲಿರುವ ರಷ್ಯಾದ ಕುರಿಲ್ ದ್ವೀಪಗಳ ಪ್ರಮುಖ ವಸಾಹತು ಪ್ರದೇಶವಾದ ಸೆವೆರೊ-ಕುರಿಲ್ಸ್ಕ್​ನ ಕರಾವಳಿ ಪ್ರದೇಶಕ್ಕೆ ಮೊದಲ ಸುನಾಮಿ ಅಲೆ ಅಪ್ಪಳಿಸಿತು ಎಂದು ಸ್ಥಳೀಯ ಗವರ್ನರ್ ವ್ಯಾಲೆರಿ ಲಿಮರೆಂಕೊ ಹೇಳಿದ್ದಾರೆ. ಅಲೆಗಳ ಪ್ರಭಾವ ಮಾಯವಾಗುವವರೆಗೂ ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ತಾಣಕ್ಕೆ ರವಾನಿಸಲಾಗಿದೆ. ಸದ್ಯ ಜನರು ಎತ್ತರದ ಪ್ರದೇಶಗಳಲ್ಲಿದ್ದಾರೆ ಎಂದು ವ್ಯಾಲೆರಿ ಲಿಮರೆಂಕೊ ಅವರು ಹೇಳಿದ್ದಾರೆ.

ಭೂಕಂಪದಿಂದ ಸುನಾಮಿ ಉಂಟಾಗಿದ್ದು, ಹವಾಯಿಯನ್ ದ್ವೀಪಗಳ ಕರಾವಳಿಯಲ್ಲಿ ಹಾನಿ ಉಂಟುಮಾಡಬಹುದು ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ. ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆಯಲ್ಲಿ ತಿಳಿಸಲಾಗಿದೆ.

ಸ್ಥಳೀಯ ಸಮಯ ರಾತ್ರಿ 11.40ರ ಸುಮಾರಿಗೆ ಕರಾವಳಿಯಲ್ಲಿ ಸಣ್ಣ ಸುನಾಮಿ ಅಲೆಗಳು ಏಳಲಿವೆ ಎಂದು ಒರೆಗಾನ್ ತುರ್ತು ನಿರ್ವಹಣಾ ಇಲಾಖೆ ಫೇಸ್‌ಬುಕ್‌ನಲ್ಲಿ ತಿಳಿಸಿದೆ. ಅಲೆಗಳ ಎತ್ತರವು 1 ರಿಂದ 2 ಅಡಿ (30 ರಿಂದ 60 ಸೆಂಟಿಮೀಟರ್) ವರೆಗೆ ಇರುತ್ತದೆ. ಜನರು ಕಡಲತೀರಗಳು, ಬಂದರುಗಳು ಮತ್ತು ಸಮುದ್ರ ಪ್ರದೇಶಗಳಿಂದ ದೂರವಿರಬೇಕು ಎಂದು ಒತ್ತಾಯಿಸಿದೆ. ಅಲ್ಲದೆ, ಇದು ದೊಡ್ಡ ಸುನಾಮಿ ಅಲ್ಲದಿದ್ದರೂ ಅಪಾಯಕಾರಿ ಪ್ರವಾಹಗಳು ಮತ್ತು ಬಲವಾದ ಅಲೆಗಳು ನೀರಿನ ಬಳಿ ಇರುವವರಿಗೆ ಅಪಾಯವನ್ನುಂಟುಮಾಡಬಹುದು ಎಂದು ಇಲಾಖೆ ತಿಳಿಸಿದೆ.

ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯ, ವಾಷಿಂಗ್ಟನ್ ರಾಜ್ಯ ಮತ್ತು ಕ್ಯಾಲಿಫೋರ್ನಿಯಾವನ್ನು ವ್ಯಾಪಿಸಿರುವ ಪಶ್ಚಿಮ ಕರಾವಳಿಯ ಹೆಚ್ಚಿನ ಭಾಗವು ಸುನಾಮಿ ಎಚ್ಚರಿಕೆಯಲ್ಲಿದೆ.

ಅಂದಹಾಗೆ, ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ 1,80,000 ಜನಸಂಖ್ಯೆಯನ್ನು ಹೊಂದಿರುವ ರಷ್ಯಾದ ನಗರವಾದ ಪೆಟ್ರೋಪಾವ್ಲೋವ್ಸ್ಕ್-ಕಮ್ಚಟ್ಸ್ಕಿಯಿಂದ ಪೂರ್ವ-ಆಗ್ನೇಯಕ್ಕೆ ಸುಮಾರು 119 ಕಿಲೋಮೀಟರ್ (74 ಮೈಲುಗಳು) ದೂರದಲ್ಲಿ ಭೂಕಂಪದ ಕೇಂದ್ರಬಿಂದುವನ್ನು ಗುರುತಿಸಲಾಗಿದೆ. 6.9 ತೀವ್ರತೆಯಷ್ಟು ಬಲವಾದ ಕಂಪನಗಳು ದಾಖಲಾಗಿವೆ. ಅಲ್ಲದೆ, ಸರಣಿ ಕಂಪನಗಳ ವರದಿಯು ಕೂಡ ಆಗಿದೆ.

ಭೂಕಂಪದಿಂದಾಗಿ ಪೆಟ್ರೋಪಾವ್ಲೋವ್ಸ್ಕ್-ಕಮ್ಚಾಟ್ಸ್ಕಿ ನಗರದಲ್ಲಿ ಕಟ್ಟಡಗಳು ಮತ್ತು ಕಾರುಗಳು ರಸ್ತೆಗಳಲ್ಲಿ ತೂಗಾಡಿದ್ದು, ವಿದ್ಯುತ್ ಕಡಿತ ಮತ್ತು ಮೊಬೈಲ್ ಫೋನ್ ಸೇವೆಯಲ್ಲಿ ಅಡಚಣೆಗಳು ಕಂಡುಬಂದಿವೆ. ಭೂಕಂಪದ ನಂತರ ಕಮ್ಚಾಟ್ಕಾದಲ್ಲಿ ಹಲವಾರು ಜನರು ವೈದ್ಯಕೀಯ ನೆರವನ್ನು ಕೋರಿದ್ದಾರೆ. ಆದರೆ, ಈವರೆಗೆ ಯಾವುದೇ ಗಂಭೀರ ಗಾಯಗಳು ವರದಿಯಾಗಿಲ್ಲ ಎಂದು ಪ್ರಾದೇಶಿಕ ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

2011ರ ಮಾರ್ಚ್ ತಿಂಗಳಲ್ಲಿ ಈಶಾನ್ಯ ಜಪಾನ್‌ನಲ್ಲಿ ಸಂಭವಿಸಿದ 9.0 ತೀವ್ರತೆಯ ಭೂಕಂಪದ ನಂತರ ಇಂದು ಸಂಭವಿಸಿದ ಭೂಕಂಪವು ವಿಶ್ವದಲ್ಲಿ ಎಲ್ಲಿಯೂ ಸಂಭವಿಸದ ಅತ್ಯಂತ ಪ್ರಬಲ ಎಂದು ಕಂಡುಬಂದಿದೆ. ಸುನಾಮಿ ಎಚ್ಚರಿಕೆಯಿಂದಾಗಿ ಜಪಾನ್‌ನಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಅಸ್ತವ್ಯಸ್ತತೆ ಉಂಟಾಗಿದೆ. ಜಪಾನ್‌ನ ಹೊನ್ಶು ದ್ವೀಪದ ಉತ್ತರ ತುದಿಯಲ್ಲಿರುವ ಹೊಕ್ಕೈಡೊ ಮತ್ತು ಅಮೋರಿಯನ್ನು ಸಂಪರ್ಕಿಸುವ ದೋಣಿಗಳನ್ನು ಹಾಗೂ ಟೋಕಿಯೊ ಮತ್ತು ಹತ್ತಿರದ ದ್ವೀಪಗಳನ್ನು ಸಂಪರ್ಕಿಸುವ ದೋಣಿಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು ನಿರ್ವಾಹಕರ ಪ್ರಕಾರ ಕೆಲವು ಸ್ಥಳೀಯ ರೈಲು ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ ಅಥವಾ ವಿಳಂಬಗೊಳಿಸಲಾಗಿದೆ. ಸೆಂಡೈ ವಿಮಾನ ನಿಲ್ದಾಣವು ತಾತ್ಕಾಲಿಕವಾಗಿ ತನ್ನ ರನ್‌ವೇಯನ್ನು ಮುಚ್ಚಿದೆ. (ಏಜೆನ್ಸೀಸ್​)