ಕೈ ಆಕಾರದಲ್ಲಿ ಕೆತ್ತಲಾದ ದೊಡ್ಡದಾದ ಮರದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು...ಈ ಅಪರೂಪದ ಮರ ಇರುವುದು ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಡೋಗ್ರಿಪೊರಾದಲ್ಲಿ ಎಂದು ಪ್ರತಿಪಾದಿಸಲಾಗುತ್ತಿದೆ. ಉತ್ತರ ಕಾಶ್ಮೀರದ ಡೋಗ್ರಿಪೊರಾದಲ್ಲಿರುವ ಮರದ ಕೆತ್ತನೆ...ಇಂದು ಫೋಟೋದೊಂದಿಗೆ ಕ್ಯಾಪ್ಷನ್ ಇದೆ.
ಆದರೆ ಈ ಕೈ ಆಕಾರದಲ್ಲಿ ಕೆತ್ತಿರುವ ಮರ ಇರುವುದು ಕಾಶ್ಮೀರದಲ್ಲಿ ಅಲ್ಲ ಎಂಬ ವಿಷಯ ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಂ ನಡೆಸಿದ ಫ್ಯಾಕ್ಟ್ಚೆಕ್ನಿಂದ ಗೊತ್ತಾಗಿದೆ. ಅಷ್ಟಕ್ಕೂ ಈ ಮರ ನಮ್ಮ ದೇಶದಲ್ಲೇ ಇಲ್ಲ...ಲಂಡನ್ನ ವೇಲ್ಸ್ನಲ್ಲಿರುವ 'ದಿ ಜೈಂಟ್ ಹ್ಯಾಂಡ್ ಆಫ್ ವೈರ್ನ್ವಿ (ವೈರ್ನ್ವಿ ಸರೋವರದ ಅತಿದೊಡ್ಡ ಕೈ)' ಎಂಬುದು ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೋವನ್ನು ರಿವರ್ಸ್ ಸರ್ಚಿಂಗ್ಗೆ ಒಳಪಡಿಸಿದಾಗ ಅದು ಲಂಡನ್ನಲ್ಲಿ ಇರುವ ಮರ ಎಂಬ ಸತ್ಯ ಗೊತ್ತಾಗಿದೆ. ವೈರ್ನ್ವಿ ಸರೋವರದ ದಡದಲ್ಲಿರುವ ಇದು ಯುಕೆಯ ಅತ್ಯಂತ ಎತ್ತರದ ಮರವಾಗಿತ್ತು. ಆದರೆ ಕೆಲವು ಸುರಕ್ಷತಾ ಕ್ರಮಗಳಿಗಾಗಿ ಅದನ್ನು ಕಡಿಯಲಾಯಿತು. ಕಡಿದ ಮರವನ್ನು ಕಲಾವಿದ ಸೈಮನ್ ಒ'ರೂರ್ಕೆ ಎಂಬುವರು ದೈತ್ಯ ಕೈ ಆಕಾರದಲ್ಲಿ ಕೆತ್ತನೆ ಮಾಡಿ, ಸುಂದರಗೊಳಿಸಿದ್ದಾರೆ ಎನ್ನಲಾಗಿದೆ. ಹಾಗೇ ಈ ಮರದ ಬಗ್ಗೆ ಬಿಬಿಸಿ ನ್ಯೂಸ್ ಕೂಡ ಆರ್ಟಿಕಲ್ ಬರೆದಿತ್ತು. 20 ಅಂತಸ್ತಿನ ಕಟ್ಟಡಗಳಿಗಿಂತಲೂ ಈ ಮರ ಎತ್ತರವಾಗಿತ್ತು..ಸುಮಾರು 209 ಅಡಿ ಎತ್ತರವಿತ್ತು ಎಂಬುದು ಆ ಲೇಖನದಲ್ಲಿ ಉಲ್ಲೇಖವಾಗಿದೆ. ಹಾಗೇ ಈಗಿರುವ ಕೈ ಆಕಾರದ ಮರ 50 ಅಡಿ ಎತ್ತರವಿದೆ ಎನ್ನಲಾಗಿದೆ. (ಏಜೆನ್ಸೀಸ್)