ಸಾಗರ: ಸಹಕಾರ ಸಂಘಟನೆಗಳು ನಂಬಿಕೆ ಮೇಲೆ ನಡೆಯುತ್ತವೆ ಅದನ್ನು ವ್ಯವಸ್ಥಿತವಾಗಿ ಮುನ್ನಡೆಸಬೇಕು. ಈ ಕ್ಷೇತ್ರದಲ್ಲಿ ರೈತರು ಹೆಚ್ಚು ತೊಡಗಿಕೊಳ್ಳುವ ಮೂಲಕ ಆರ್ಥಿಕ ಸಬಲೀಕರಣ ಕಂಡುಕೊಳ್ಳಬಹುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಈಡಿಗರ ಸಭಾಭವನದಲ್ಲಿ ಬುಧವಾರ ರಾಜ್ಯ ಸಹಕಾರ ಮಹಾಮಂಡಲ, ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಬ್ಯಾಂಕ್ನಿಂದ ಆಯೋಜಿಸಿದ್ದ 73ನೇ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು, ಹೈನುಗಾರರ ಬೇಡಿಕೆಯಂತೆ ಹಾಲಿನ ದರ ಏರಿಕೆ ಮಾಡಲಾಗಿದೆ ಎಂದರು.
ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರಕ್ಕೆ ನೀಡುತ್ತಿದ್ದ ಅನುದಾನ ಕಡಿತಗೊಳಿಸಿದ್ದರಿಂದ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯ ವಿತರಿಸಲು ಸಾಧ್ಯವಾಗುತ್ತಿಲ್ಲ. ಎಲ್ಲರೂ ಒಟ್ಟಾಗಿ ರೈತರ ಏಳಿಗೆಗಾಗಿ ಶ್ರಮಿಸಬೇಕಿದೆ. ನಾನು ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿದ್ದರಿಂದ ಸಹಕಾರ ಕ್ಷೇತ್ರದ ಬಗ್ಗೆ ಹೆಚ್ಚಿನ ಅರಿವು ಹೊಂದಲು ಸಾಧ್ಯವಾಗಿದೆ. ಜತೆಗೆ ಕ್ಷೇತ್ರವ್ಯಾಪ್ತಿಯಲ್ಲಿ ಸಹಕಾರ ಸಂಘಗಳ ನೂತನ ಕಟ್ಟಡ ಸೇರಿ ವಿವಿಧ ಅಭಿವೃದ್ಧಿಗೆ ಅನುದಾನ ನೀಡಲು ಸಹಕಾರಿಯಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡುವವರು ಜಾತಿ ಮತ್ತು ರಾಜಕೀಯ ಪಕ್ಷಗಳನ್ನು ಬಿಟ್ಟು ಯೋಚಿಸಬೇಕು. ಆರ್ಥಿಕ ಸದೃಢತೆ ಸಾಧಿಸಲು ಸಹಕಾರ ಕ್ಷೇತ್ರ ಅತ್ಯುತ್ತಮ. ರಾಜ್ಯದಲ್ಲಿ ಅಪೆಕ್ಸ್ ಬ್ಯಾಂಕ್ ಮೂಲಕ 40 ಲಕ್ಷ ರೈತರಿಗೆ 27 ಸಾವಿರ ಕೋಟಿ ರೂ. ಸಾಲ ಸೌಲಭ್ಯ ನೀಡಲಾಗಿದೆ. ಹಾಲಿನ ದರ ಹೆಚ್ಚಿಸುವ ಮೊದಲು ಪ್ರತಿದಿನ 1.10 ಕೋಟಿ ಲೀ. ಹಾಲು ಉತ್ಪಾದನೆಯಾಗುತ್ತಿತ್ತು. ಇದೀಗ 1.50 ಕೋಟಿ ಲೀ. ಉತ್ಪಾದನೆ ಮಾಡಲಾಗುತ್ತಿದೆ. ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವವರು ಇದನ್ನು ಗಮನಿಸಬೇಕು ಎಂದು ಪ್ರತಿಕ್ರಿಯಿಸಿದರು.
ಸಹಕಾರಿ ಯೂನಿಯನ್ ಉಪಾಧ್ಯಕ್ಷ ಅಮೃತೇಶ್ವರ, ಬಿ.ಕೆ.ಶಿವಕುಮಾರ್, ಬಿ.ಆರ್.ಜಯಂತ್, ಜಿ.ಎನ್.ಸುಧೀರ್, ಕೆ.ಎಂ.ಸೂರ್ಯನಾರಾಯಣ, ಬಿ.ಎ.ಇಂದೂಧರ ಬೇಸೂರು, ಲೋಕನಾಥ್, ಸರಸ್ವತಿ, ಕೃಷ್ಣಮೂರ್ತಿ ಭಂಡಾರಿ, ತಿಮ್ಮಪ್ಪ, ಹರನಾಥ ರಾವ್ ಇತರರಿದ್ದರು.