ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪುತ್ರರ ಜತೆ ಸೇರಿ ಸ್ಥಾಪಿಸಿದ ಕ್ರಿಪ್ಟೋ ಕರೆನ್ಸಿ ಉದ್ಯಮದಿಂದ ಒಂದೇ ವರ್ಷದಲ್ಲಿ 57.7 ದಶಲಕ್ಷ ಡಾಲರ್ (ಸುಮಾರು 481.8 ಕೋಟಿ ರೂ.) ಗಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್, ಡೊನಾಲ್ಡ್ ಟ್ರಂಪ್ ಜೂನಿಯರ್, ಎರಿಕ್ ಟ್ರಂಪ್ ಮತ್ತು ಬ್ಯಾರನ್ ಟ್ರಂಪ್ 2023ರಲ್ಲಿ ಪ್ರಾರಂಭಿಸಿದ ವರ್ಲ್ಡ್ ಲಿಬರ್ಟಿ ಫೈನಾನ್ಶಿಯಲ್ ಎಂಬ ಸಂಸ್ಥೆಯ ಟೋಕನ್ ಮಾರಾಟದಿಂದ ಇಷ್ಟು ಆದಾಯ ಬಂದಿದೆ. 2024ರ ಈ ಮಾಹಿತಿಯು ಆಫೀಸ್ ಆಫ್ ಗವರ್ನ್ ಮೆಂಟ್ ಎಥಿಕ್ಸ್ ಬಿಡುಗಡೆ ಮಾಡಿದ 234 ಪುಟಗಳ ವರದಿಯಲ್ಲಿ ಇದೆ. ಕ್ರಿಪ್ಟೋಕರೆನ್ಸಿ ಉದ್ಯಮ ಟ್ರಂಪ್ ಕುಟುಂಬದ ಆದಾಯದ ದೊಡ್ಡ ಮೂಲವೇನೂ ಅಲ್ಲ. ಬೇರೆ ಬಿಜಿನೆಸ್ಗಳಿಂದ ಅವರಿಗೆ ಇನ್ನೂ ಹೆಚ್ಚು ಹಣ ಬರುತ್ತಿದೆ. ಗಾಲ್ಪ್ ಕ್ಲಬ್ಗಳು, ಹೋಟೆಲ್ಗಳು, ಲೈಸೆನ್ಸಿಂಗ್ ಒಪ್ಪಂದಗಳು ಮತ್ತು ಡಿಜಿಟಲ್ ಉದ್ಯಮಗಳಿಂದ ಟ್ರಂಪ್ 2024ರಲ್ಲಿ 600 ದಶಲಕ್ಷ ಡಾಲರ್ಗಿಂತ ಹೆಚ್ಚು ಆದಾಯ ಗಳಿಸಿದ್ದಾರೆ.
ಟ್ರಂಪ್ ಒಡೆತನದ ಮಿಯಾಮಿ ಮೂಲದ ಕಂಪನಿ ‘ಟ್ರಂಪ್ ಎಂಡೆವರ್ ಎಲ್ಎಲ್ಸಿ’ ಕಳೆದ ವರ್ಷ 110 ದಶಲಕ್ಷ ಡಾಲರ್ ಆದಾಯ ಗಳಿಸಿದೆ. ಟ್ರಂಪ್ ಅವರ ಒಟ್ಟು ನಿವ್ವಳ ಮೌಲ್ಯ 4.8 ಶತಕೋಟಿ ಡಾಲರ್. ಮಾರ್-ಎ-ಲಾಗೊ, ಹಲವಾರು ಗಾಲ್ಪ್ ರೆಸಾರ್ಟ್ ಗಳು, ಮಾಧ್ಯಮ ಮತ್ತು ತಂತ್ರಜ್ಞಾನ ಸಮೂಹ ಸೇರಿದಂತೆ ಇತರ 22 ಬಿಜಿನೆಸ್ಗಳಿಂದಲೂ ನೂರಾರು ದಶಲಕ್ಷ ಡಾಲರ್ಗಿಂತ ಹೆಚ್ಚಿನ ಹಣ ಬಂದಿದೆ.
ಎನ್ಎಫ್ಟಿ ಲೈಸೆನ್ಸಿಂಗ್, ಇಥೆರಿಯಮ್ ವಾಲೆಟ್ ಇವು ಟ್ರಂಪ್ರ ವ್ಯಾಪಾರ ಸಾಮ್ರಾಜ್ಯದ ಡಿಜಿಟಲ್ ಉದ್ಯಮಗಳು. ಟ್ರಂಪ್ರ ಹೊಸ ಕ್ರಿಪ್ಟೋ ಸಂಬಂಧಿ ಉದ್ಯಮಗಳಲ್ಲಿ ಒಂದಾದ ‘ಫೈಟ್ ಫೈಟ್ ಫೈಟ್ ಎಲ್ಎಲ್ಸಿ’ಯು ಅವರ ಮೀಮ್ ಕಾಯಿನ್ಗಳನ್ನು ಮಾರಾಟ ಮಾಡುತ್ತದೆ. ಇದು ಈ ವರ್ಷದ ಜನವರಿಯಲ್ಲಿ ಪ್ರಾರಂಭವಾಗಿದ್ದು, 2024ರ ಆರ್ಥಿಕ ಫಲಿತಾಂಶದಲ್ಲಿ ಇದರ ಬಗ್ಗೆ ವಿವರಗಳಿಲ್ಲ. ಮತ್ತೊಂದು ಸಂಸ್ಥೆ ‘ಸಿಐಸಿ ಡಿಜಿಟಲ್ ಎಲ್ಎಲ್ಸಿ’ 2024ರಲ್ಲಿ 1.1 ದಶಲಕ್ಷ ಡಾಲರ್ ಗಳಿಸಿದೆ. ಇದು ಕನಿಷ್ಠ 1 ದಶಲಕ್ಷ ಡಾಲರ್ ಮೌಲ್ಯದ ಇಥೆರಿಯಮ್ ಇರುವ ಡಿಜಿಟಲ್ ವ್ಯಾಲೆಟ್ಅನ್ನೂ ಹೊಂದಿದೆ.
ಟ್ರಂಪ್ರ ರಿಯಲ್ ಎಸ್ಟೇಟ್ ಸಾಲಗಳು ಮತ್ತು ಕ್ರೆಡಿಟ್ ಸಾಲದ ವಿವರಗಳೂ ಈ ವರದಿಯಲ್ಲಿವೆ. ಪ್ರಥಮ ಪ್ರಜೆ ಮೆಲನಿಯಾ ಅವರ ಆಸ್ತಿಗಳು ಮತ್ತು ಟ್ರಂಪ್ರ
ವೈಯಕ್ತಿಕ ಹೂಡಿಕೆಗಳ ಮಾಹಿತಿಯೂ ಇದರಲ್ಲಿದೆ. ಬಾಕಿ ಇರುವ 7 ರಿಯಲ್ ಎಸ್ಟೇಟ್ ಸಾಲಗಳನ್ನು ಟ್ರಂಪ್ ಬಹಿರಂಗಪಡಿಸಿದ್ದಾರೆ, ಟ್ರಂಪ್ ಟವರ್, ಟ್ರಂಪ್ ನ್ಯಾಷನಲ್ ಡೊರಾಲ್ ಮತ್ತು 40 ವಾಲ್ ಸ್ಟ್ರೀಟ್ ಮೇಲಿನ ಸಾಲಗಳು ತಲಾ 50 ದಶಲಕ್ಷ ಡಾಲರ್ಗಿಂತ ಜಾಸ್ತಿ ಇವೆ. ಜೊತೆಗೆ, ಅವರು ತಮ್ಮ ಅಮೆರಿಕನ್ ಎಕ್ಸ್ ಪ್ರೆಸ್ ಖಾತೆಯಲ್ಲಿ ಕನಿಷ್ಠ 15,000 ಡಾಲರ್ನ ಕ್ರೆಡಿಟ್ ಕಾರ್ಡ್ ಬಾಕಿಯನ್ನೂ ಹೊಂದಿದ್ದಾರೆ.