ನ್ಯೂಸ್

ಜನರಿಂದಲೇ ಚುನಾವಣೆ ಕಹಳೆ: ಪ್ರಧಾನಿ ನರೇಂದ್ರ ಮೋದಿ

ಬುಲಂದ್​ಶಹರ್/ರೇವಾರಿ: ಅಭಿವೃದ್ಧಿಯ ಕಹಳೆ ಯನ್ನು ಊದುವುದಷ್ಟೇ ತಮ್ಮ ಕೆಲಸ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಪರವಾಗಿ ಜನರೇ ಚುನಾವಣೆ ಕಹಳೆಯನ್ನು ಊದುತ್ತಾರೆಂದು ಪ್ರತಿಪಾದಿಸಿದ್ದಾರೆ. ಉತ್ತರ ಪ್ರದೇಶದ ಬುಲಂದ್​ಶಹರ್​ನಲ್ಲಿ 19,100 ಕೋಟಿ ರೂಪಾಯಿ ಮೊತ್ತದ ನಾನಾ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ- ಉದ್ಘಾಟನೆ ನಂತರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮೋದಿ, ಎಲ್ಲ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲಾಗುತ್ತದೆ ಎಂದರು. ‘ಇದುವೇ ನಿಜವಾದ ಜಾತ್ಯತೀತತೆ, ಇದುವೇ ನೈಜ ಸಾಮಾಜಿಕ ನ್ಯಾಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಮೋದಿ ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡುತ್ತಾರೆ. ನಮ್ಮ ಸರ್ಕಾರದಡಿ 25 ಕೋಟಿ ಜನರು ಬಡತನದಿಂದ ಹೊರಗೆ ಬರಲು ಇದುವೇ ಕಾರಣ. ಇನ್ನಷ್ಟು ಜನರು ಬಡತನದಿಂದ ಹೊರಬರುವ ಆಶಾವಾದವಿದೆ’ ಎಂದು ಮೋದಿ ಹೇಳಿದರು. ‘ನೀವು ನನ್ನ ಕುಟುಂಬ. ನಿಮ್ಮ ಕನಸೇ ನನ್ನ ಸಂಕಲ್ಪ. ನಿಮ್ಮಂಥ ಸಾಮಾನ್ಯ ಜನರ ಸಬಲೀಕರಣವೇ ನನ್ನ ಬಂಡವಾಳವಾಗಿದೆ’ ಎಂದು ಪ್ರಧಾನಿ ನುಡಿದರು. ‘ಮೋದಿ ಗ್ಯಾರಂಟಿ’ ಬಗ್ಗೆ ಮಾತನಾಡಿದ ಪ್ರಧಾನಿ, ತಮ್ಮ ಸರ್ಕಾರ ನುಡಿದಂತೆ ನಡೆಯುತ್ತದೆ ಎಂದರು.

ಮಾಧ್ಯಮ ಪ್ರಚಾರ: ಬುಲಂದ್​ಶಹರ್ ಕಾರ್ಯಕ್ರಮದೊಂದಿಗೆ ಪ್ರಧಾನಿ ಲೋಕಸಭೆ ಚುನಾವಣೆಯ ಕಹಳೆ ಊದಲಿದ್ದಾರೆಂದು ಕೆಲವು ವಾಹಿನಿಗಳು ಸುದ್ದಿ ಬಿತ್ತರಿಸಿರುವುದನ್ನು ಗಮನಿಸಿದ್ದಾಗಿ ಮೋದಿ ಹೇಳಿದರು. ಆದರೆ ತಮಗೆ ಅಂಥ ಅಗತ್ಯವೇನೂ ಇಲ್ಲ. ಜನರೇ ಆ ಕೆಲಸ ಮಾಡುತ್ತಾರೆ ಎಂದರು. ಜನರು ಹಾಗೆ ಮಾಡುವಾಗ ಆ ವಿಚಾರದಲ್ಲಿ ಮೋದಿ ಸಮಯ ವ್ಯಯಿಸಬೇಕಿಲ್ಲ. ಜನಸೇವೆಗೆ ಸಮಯ ವಿನಿಯೋಗಿಸುತ್ತಾರೆ ಎಂದರು.

ಪೊಳ್ಳು ಘೋಷಣೆಗಳು: ಸ್ವಾತಂತ್ರ್ಯ ನಂತರದಲ್ಲಿ ದೀರ್ಘ ಸಮಯದವರೆಗೆ ಒಬ್ಬರು ‘ಗರೀಬಿ ಹಠಾವೋ’ ಘೋಷಣೆ ನೀಡಿದರು. ಇನ್ನೊಬ್ಬರು ಸಾಮಾಜಿಕ ನ್ಯಾಯದ ಘೋಷಣೆ ನೀಡಿದರು. ಆದರೆ ಇವೆಲ್ಲ ಪೊಳ್ಳು ಘೋಷಣೆಗಳಾಗಿದ್ದು ಕೆಲವು ಜನರಷ್ಟೇ ಶ್ರೀಮಂತರಾಗಿ ಅವರ ರಾಜಕೀಯ ಸಮೃದ್ಧಿಗೊಂಡಿದ್ದನ್ನು ದೇಶದ ಬಡಜನರು ಕಂಡಿದ್ದಾರೆಂದು ಮೋದಿ ಟೀಕಿಸಿದರು.

ಪ್ರಾದೇಶಿಕ ಅಸಮಾನತೆ: ಸ್ವಾತಂತ್ರ್ಯ ಬಂದ ನಂತರ ಅಭಿವೃದ್ಧಿಯನ್ನು ಕೆಲವು ಪ್ರದೇಶ ಗಳಿಗೆ ಮಾತ್ರ ಸೀಮಿತಗೊಳಿಸಿದ್ದರಿಂದ ದೇಶದ ಬಹುಭಾಗ ಅಭಿವೃದ್ಧಿಯಿಂದ ವಂಚಿತವಾಗಿತ್ತು ಎಂದು ವಿವರಿಸಿದರು. ಉತ್ತರ ಪ್ರದೇಶವನ್ನೂ ಹಲವು ದಶಕಗಳಿಂದ ವಂಚಿಸಲಾಗಿತ್ತು ಎಂದ ಮೋದಿ, ಉತ್ತರ ಪ್ರದೇಶದ ತ್ವರಿತ ಅಭಿವೃದ್ಧಿಯಿಲ್ಲದೆ ವಿಕಸಿತ ಭಾರತವನ್ನು ಕಟ್ಟಲು ಸಾಧ್ಯವಿಲ್ಲ ಎಂದರು.

ಮಹಾರಾಷ್ಟ್ರದ 23 ಸ್ಥಾನಗಳಲ್ಲಿ ಸ್ಪರ್ಧೆಗೆ ಶಿವಸೇನೆ ಪಟ್ಟು: ಮಹಾರಾಷ್ಟ್ರದ 23 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಪಟ್ಟು ಹಿಡಿದಿರುವುದರಿಂದ ಪ್ರತಿಪಕ್ಷಗಳಲ್ಲಿನ ಅನೈಕ್ಯತೆ ಬಯಲಿಗೆ ಬಂದಿದೆ. ಪಕ್ಷ 23 ಸ್ಥಾನಗಳಲ್ಲಿ ಸ್ಪರ್ಧಿಸುವುದಕ್ಕೆ ಬದ್ಧವಾಗಿದೆ ಎಂದು ಸಂಸದ ಸಂಜಯ್ ರಾವತ್ ಬುಧವಾರ ಇಲ್ಲಿ ಹೇಳಿದ್ದಾರೆ. ಸ್ಥಾನ ಹೊಂದಾಣಿಕೆ ಬಗ್ಗೆ ಯಾವುದೇ ಸೂತ್ರ ರೂಪುಗೊಂಡಿಲ್ಲ. ಅಭ್ಯರ್ಥಿ ಗಳ ಗೆಲ್ಲುವ ಸಾಮರ್ಥ್ಯ ನೋಡಿಯಷ್ಟೇ ಟಿಕೆಟ್ ನೀಡಲಾಗುತ್ತದೆ ಎಂದವರು ತಿಳಿಸಿದ್ದಾರೆ. ಈ ಕ್ಷೇತ್ರಗಳಲ್ಲಿ ಶಿವಸೇನೆಯ ಬಲವನ್ನು ಆಧರಿಸಿ ಪಕ್ಷ ಈ ನಿಲುವಿಗೆ ಬಂದಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಪ್ರತಿಪಕ್ಷಗಳ ವಿರುದ್ಧ ಬಳಸುವ ಬಿಜೆಪಿ ಧೋರಣೆಯನ್ನು ಖಂಡಿಸಿದ್ದಾರೆ.

ಪ್ರಮುಖ ಯೋಜನೆಗಳು

  • ನವ ಖುರ್ಜಾ ಮತ್ತು ನವ ರೇವಾರಿ ನಡುವಿನ 173 ಕಿ.ಮೀ. ಉದ್ದದ ದ್ವಿಪಥ ವಿದ್ಯುದೀಕೃತ ಸೆಕ್ಷನ್ ವಿಡಿಯೋ ಕಾನ್ಪರೆನ್ಸ್ ಉದ್ಘಾಟನೆ.
  • ಮಥುರಾ-ಪಲ್ವಾಲ್ ಸೆಕ್ಷನ್ ಮತ್ತು ಚಿಪಿಯಾನಾ ಬುಝುುರ್ಗ್-ದಾದ್ರಿ ಸೆಕ್ಷನ್ ನಡುವಿನ ರೈಲು ಮಾರ್ಗ ಉದ್ಘಾಟನೆ.
  • ಹಲವು ರಸ್ತೆ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ.
  • ಇಂಡಿಯನ್ ಆಯಿಲ್​ನ ತುಂಡ್ಲಾ-ಗವಾರಿಯಾ ಪೈಪ್​ಲೈನ್ ಉದ್ಘಾಟನೆ.