ನವದೆಹಲಿ: ಅಮೆರಿಕದ ಮಾಜಿ ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಯತ್ನಿಸಿ ಭದ್ರತಾ ಏಜೆನ್ಸಿಯಿಂದ ಹತ್ಯೆಗೀಡಾದ ಥಾಮಸ್ ಮ್ಯಾಥ್ಯೂ ಕ್ರುಕ್ಸ್ ಎಂಬ 20 ವರ್ಷದ ಯುವಕನ ಕುರಿತು ಇನ್ನಷ್ಟು ಮಾಹಿತಿಗಳು ಬಹಿರಂಗಗೊಳ್ಳಲಾರಂಭಿಸಿವೆ. ಅದಾಗ್ಯೂ ಹತ್ಯೆ ಯತ್ನಕ್ಕೆ ಕಾರಣವೇನು? ಈ ಪ್ರಯತ್ನದ ಹಿಂದಿನ ರೂವಾರಿ ಯಾರು? ಎಂಬಿತ್ಯಾದಿ ಸಂಗತಿಗಳು ಇನ್ನೂ ಖಚಿತವಾಗಿಲ್ಲ. ಹತ್ಯೆಗೈಯಲು ಯತ್ನಿಸಿದ್ದ ಥಾಮಸ್ನ ವ್ಯಕ್ತಿತ್ವ ಇನ್ನೂ ನಿಗೂಢವಾಗಿಯೇ ಉಳಿದಿದೆ. ಥಾಮಸ್ ಶಾಲಾ ರೈಫಲ್ ಟೀಮ್ಂದ ತಿರಸ್ಕೃತಗೊಂಡಿದ್ದ, ಗುರಿ ಇಡುವುದರಲ್ಲಿ ಅತ್ಯಂತ ದಡ್ಡನಾಗಿದ್ದ ಎಂಬುದನ್ನೂ ಸಹಪಾಠಿಗಳು ಹೇಳಿಕೊಂಡಿದ್ದಾರೆ.
ಥಾಮಸ್ನ ಕುಟುಂಬ ಸದಸ್ಯರು, ಸಹಪಾಠಿಗಳು, ಶಿಕ್ಷಕರು ಮತ್ತು ಸಹೋದ್ಯೋಗಿಗಳು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದರೂ ಈತನ ನಿಲುವು ಖಚಿತಗೊಂಡಿಲ್ಲ. ಆದರೆ ಈತನಿಗೆ ರಾಜಕೀಯದಲ್ಲಿ ಆಸಕ್ತಿ ಇತ್ತು ಎಂಬ ಅಂಶ ಕಂಡುಬಂದಿದ್ದರೂ ಈತನ ತತ್ವ-ಸಿದ್ಧಾಂತಗಳ ಬಗ್ಗೆ ನಿಖರತೆ ಸಿಕ್ಕಿಲ್ಲ. ನೋಂದಾಯಿತ ರಿಪಬ್ಲಿಕನ್ ಆಗಿರುವ ಥಾಮಸ್, 17 ವರ್ಷ ತುಂಬಿದ ತಕ್ಷಣ ರಿಪಬ್ಲಿಕನ್ ಪಕ್ಷಕ್ಕೆ ಸಣ್ಣ ದೇಣಿಗೆ ನೀಡಿದ್ದ.
ಸೋಷಿಯಲ್ ಮೀಡಿಯಾದಲ್ಲೂ ವಿರಳ: ಥಾಮಸ್ನ ಸೋಷಿಯಲ್ ಮೀಡಿಯಾ ಆಪ್ನಲ್ಲಿನ ಥಾಮಸ್ ಖಾತೆಯನ್ನೂ ತನಿಖಾಧಿಕಾರಿಗಳು ಪರಿಶೀಲಿಸಿದ್ದಾರೆ. ಆದರೆ ಅದರಲ್ಲಿ ಈತ ಅಷ್ಟು ಸಕ್ರಿಯನಾಗಿ ಇರಲಿಲ್ಲ. ಪ್ರಕರಣಕ್ಕೆ ಪೂರಕ ಅನಿಸುವಂಥ ಯಾವುದೇ ಪೋಸ್ಟ್ ಗಳು ಕಂಡುಬಂದಿಲ್ಲ. ರಾಜಕೀಯ ವಿಷಯಗಳನ್ನು ರ್ಚಚಿಸುವ, ರಾಜಕೀಯ ದೃಷ್ಟಿಕೋನಗಳನ್ನು ಹೇಳಿಕೊಳ್ಳುವ, ಹಿಂಸೆಯನ್ನು ಉತ್ತೇಜಿಸುವ ಅಥವಾ ಈಗಿನ ಘಟನೆಗೆ ಸಂಬಂಧ ಕಲ್ಪಿಸಬಹುದಾದಂಥ ಯಾವುದೇ ಸಾಕ್ಷ್ಯಗಳು ಡಿಸ್ಕಾರ್ಡ್ ಪೋಸ್ಟ್ಗಳಲ್ಲಿ ಗೋಚರಿಸಿಲ್ಲ. ಈತನ ವಿರುದ್ಧ ಯಾವುದೇ ಅಪರಾಧ ಪ್ರಕರಣವೂ ಇಲ್ಲ ಎಂದು ಎಫ್ಬಿಐ ಹೇಳಿದೆ. ಥಾಮಸ್ನ ಸೋಷಿಯಲ್ ಮೀಡಿಯಾ ಪ್ರೊಫೈಲ್ನಲ್ಲಿ ಬೆದರಿಕೆಯ ಭಾಷೆ, ಮಾನಸಿಕ ಅಸ್ವಸ್ಥತೆಯ ಲಕ್ಷಣ ಇತ್ಯಾದಿ ಕಂಡುಬಂದಿಲ್ಲ ಎಂದು ಎಫ್ಬಿಐ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.
ಒಂಟಿ, ಮೌನಿ....: ಥಾಮಸ್ ಸಾಮಾನ್ಯವಾಗಿ ಶಾಲೆಯಲ್ಲಿ ಹೆಚ್ಚಾಗಿ ಒಂಟಿಯಾಗಿ ಹಾಗೂ ಮೌನಿಯಾಗಿರುತ್ತಿದ್ದ. ಈ ಪ್ರಕರಣ ಸಂಬಂಧ ಥಾಮಸ್ನನ್ನು ಶೂಟರ್ ಎಂದು ಎಫ್ಬಿಐ ಗುರುತಿಸಿದೆ. ಥಾಮಸ್ ಜಾಣನಾಗಿದ್ದ, ಇಂಥ ಯಾವುದೇ ಹುಚ್ಚುತನ ಅವನಲ್ಲಿ ಕಂಡುಬಂದಿರಲಿಲ್ಲ ಎಂದು ಇನ್ನೊಬ್ಬ ಸಹಪಾಠಿ ಹೇಳಿಕೊಂಡಿದ್ದಾನೆ. ಈತನ ಹೈಸ್ಕೂಲ್ ಸಹಪಾಠಿಗಳು, ಥಾಮಸ್ ಗೌರವಾನ್ವಿತನಾಗಿದ್ದ ಎಂದಿದ್ದಾರೆ.
ಜಾಹೀರಾತಲ್ಲೂ ನಟಿಸಿದ್ದ: ಜಗತ್ತಿನ ಖ್ಯಾತ ಹಣಕಾಸು ನಿರ್ವಹಣಾ ಸಂಸ್ಥೆ ಬ್ಲಾ್ಯಕ್ರಾಕ್ 2022ರ ಜಾಹೀರಾತಿನಲ್ಲಿ ಥಾಮಸ್ ಕೆಲ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ. ಬೆಥೆಲ್ ಪಾರ್ಕ್ ಹೈಸ್ಕೂಲ್ನಲ್ಲಿ ಚಿತ್ರೀಕರಿಸಿದ್ದ ಈ ಜಾಹೀರಾತಿನಲ್ಲಿ ಕ್ರುಕ್ಸ್ ಮತ್ತು ಕೆಲವು ವಿದ್ಯಾರ್ಥಿಗಳು ಸಂಭಾವನೆ ಇಲ್ಲದೆ ಹಿನ್ನೆಲೆಯಲ್ಲಿ ಕಾಣಿಸಿಕೊಂಡಿದ್ದರು. ಈ ಜಾಹೀರಾತನ್ನು ಹಿಂಪಡೆದಿರುವುದಾಗಿ ಸಂಸ್ಥೆ ತಿಳಿಸಿದೆ.
ತಂದೆಯ ರೈಫಲ್: ಥಾಮಸ್ ಕೃತ್ಯವೆಸಗಿದ್ದ ಸ್ಥಳಕ್ಕೆ ಬಂದಿದ್ದ ಕಾರಿನಲ್ಲಿ ಸ್ಪೋಟಕ ಸಾಮಗ್ರಿಗಳಿದ್ದವು. ಕೃತ್ಯಕ್ಕೂ ಮುನ್ನ ಹತ್ತಿರದ ಛಾವಣಿ ಮೇಲೆ ಹೊಂಚು ಹಾಕುತ್ತಿದ್ದ ಥಾಮಸ್ನನ್ನು ಜನರು ಗುರುತಿಸಿ ಪೊಲೀಸರಿಗೆ ತಿಳಿಸಿದ್ದರು. ಆಗ ರೈಫಲ್ ತೋರಿದ್ದ ಈತನನ್ನು ಪೊಲೀಸರು ಅಲ್ಲಿಂದ ಹಿಮ್ಮೆಟ್ಟಿಸಿದ ತಕ್ಷಣ ಈತ ಟ್ರಂಪ್ ಮೇಲೆ ಗುಂಡು ಹಾರಿಸಿದ್ದ. ಅಲ್ಲದೆ ಥಾಮಸ್ ಈ ಕೃತ್ಯಕ್ಕೆ ಬಳಸಿದ್ದ ರೈಫಲ್ ಈತನ ತಂದೆಯದ್ದು ಎಂಬುದೂ ತಿಳಿದುಬಂದಿದೆ.