ನ್ಯೂಸ್

ಭಾರತಕ್ಕೆ ಟ್ರಂಪ್ ತೆರಿಗೆ ಹೊರೆ; ಬ್ರಿಕ್ಸ್ ರಾಷ್ಟ್ರಗಳೇ ಟಾರ್ಗೆಟ್, ಚೀನಾ, ಬ್ರೆಜಿಲ್ ವಿರುದ್ಧವೂ ಫೈಟ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಗದ್ದುಗೆ ಏರಿದ ಬಳಿಕ ಅಕ್ರಮ ವಲಸಿಗರ ಮೇಲೆ ಮುಗಿಬಿದ್ದಿರುವ ರಿರುವ ಡೊನಾಲ್ಡ್ ಟ್ರಂಪ್ ದೃಷ್ಟಿಯೀಗ ಬ್ರಿಕ್ಸ್ ರಾಷ್ಟ್ರಗಳ ವಿರುದ್ಧ ತೆರಿಗೆ ಯುದ್ಧ ಸಾರುವತ್ತ ತಿರುಗಿದೆ. ಅಮೆರಿಕಕ್ಕೆ ಆರ್ಥಿಕ ಹಾನಿ ಉಂಟುಮಾಡುತ್ತಿರುವ ದೇಶಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಲಾಗುವುದು; ಚೀನಾ, ಭಾರತ ಮತ್ತು ಬ್ರೆಜಿಲ್ ಹೆಚ್ಚು ತೆರಿಗೆ ವಿಧಿಸುವ ರಾಷ್ಟ್ರಗಳ ಪಟ್ಟಿಯಲ್ಲಿವೆ ಎಂದು ಟ್ರಂಪ್ ಹೇಳಿದ್ದಾರೆ.

ಫ್ಲೋರಿಡಾದಲ್ಲಿ ರಿಪಬ್ಲಿಕನ್ ಪಕ್ಷದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್ ತಮ್ಮ ಸರ್ಕಾರದ ಆದ್ಯತೆಗಳನ್ನು ಪ್ರಸ್ತಾಪಿಸಿದರು. ‘ತೆರಿಗೆ ಸಂಗ್ರಹಕ್ಕಾಗಿ ನ್ಯಾಯಯುತ ವ್ಯವಸ್ಥೆಯನ್ನು ಶೀಘ್ರದಲ್ಲೇ ರಚಿಸಲಾಗುವುದು. ಇದರಿಂದ ಹಣ ನಮ್ಮ ಖಜಾನೆಗೆ ಹರಿದು ಬರಲಿದೆ, ಅಮೆರಿಕ ಮತ್ತೆ ಶ್ರೀಮಂತ ದೇಶವಾಗಲಿದೆ. ನಾವು ನಮ್ಮ ದೇಶದ ಪ್ರಜೆಗಳ ಮೇಲೆ ತೆರಿಗೆ ವಿಧಿಸಿ ವಿದೇಶಗಳನ್ನು ಸಮೃದ್ಧಗೊಳಿಸುವುದಿಲ್ಲ, ವಿದೇಶಗಳ ಮೇಲೆ ತೆರಿಗೆ ವಿಧಿಸಿ ನಮ್ಮ ನಾಗರಿಕರನ್ನು ಸಮೃದ್ಧವಾಗಿಸುತ್ತೇವೆ’ ಎಂದರು. ತೆರಿಗೆ ಉಳಿಸಬೇಕೆಂದಿದ್ದರೆ ನಿಮ್ಮ ಉದ್ಯಮಗಳನ್ನು ಅಮೆರಿಕದಲ್ಲಿ ಸ್ಥಾಪಿಸಿ. ಆಗ ಅಮೆರಿಕದಲ್ಲಿ ಮತ್ತೊಂದು ಔದ್ಯೋಗಿಕ ಕ್ರಾಂತಿ ನಡೆಯಲಿದೆ. ಅಲ್ಪಾವಧಿಯಲ್ಲೇ ಯಾರೂ ಊಹಿಸಿರದಷ್ಟು ಪ್ರಮಾಣದ ಉದ್ದಿಮೆಗಳು ನಮ್ಮಲ್ಲಿ ಸ್ಥಾಪನೆಯಾಗಲಿವೆ. ತೆರಿಗೆ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಟ್ರಂಪ್ ಭರವಸೆ ನೀಡಿದರು.

120 ಬಿಲಿಯನ್ ಡಾಲರ್ ವಹಿವಾಟು: ಅಮೆರಿಕ ಮತ್ತು ಭಾರತದ ನಡುವೆ ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದ್ದು, 2023-24 ರಲ್ಲಿ ಇದರ ಪ್ರಮಾಣ 120 ಬಿಲಿಯನ್ ಡಾಲರ್​ನಷ್ಟಿತ್ತು. ಇದು ಕಳೆದ ಒಂದು ದಶಕದಲ್ಲಿ ವಹಿವಾಟಿನ ಪ್ರಮಾಣ ದ್ವಿಗುಣವಾಗಿದೆ. 2024ರ ಆರ್ಥಿಕ ವರ್ಷದಲ್ಲಿ ರಫ್ತು ಪ್ರಮಾಣ ಹೆಚ್ಚಾಗಿದ್ದು, 35.3 ಬಿಲಿಯನ್ ಡಾಲರ್ ಹೆಚ್ಚುವರಿ ವ್ಯಾಪಾರ ದಾಖಲಾಗಿದೆ. ಭಾರತ ಯಂತ್ರೋಪಕರಣಗಳು, ಫಾರ್ವಸೂಟಿಕಲ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಸೇರಿದಂತೆ ಹಲವು ಉತ್ಪನ್ನಗಳನ್ನು ರಪ್ತು ಮಾಡುತ್ತಿದ್ದರೆ, ಮುಖ್ಯವಾಗಿ ಖನಿಜ ಇಂಧನಗಳು, ರತ್ನಗಳು, ಯಂತ್ರೋಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿದೆ. 2018ರಲ್ಲಿ ಅಮೆರಿಕ ಮತ್ತು ಚೀನಾ ನಡುವೆ ಆರ್ಥಿಕ ಸಂಘರ್ಷ ಆರಂಭವಾದಾಗ ಚೀನಾದ ಉತ್ಪನ್ನಗಳ ಮೇಲೆ ಅಮೆರಿಕ ಹೆಚ್ಚಿನ ತೆರಿಗೆ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಇದರ ಲಾಭವನ್ನು ಭಾರತ ಪಡೆದುಕೊಂಡು ಸಾಕಷ್ಟು ಉತ್ಪನ್ನಗಳನ್ನು ಅಮೆರಿಕಕ್ಕೆ ರಫ್ತು ಮಾಡಿತ್ತು. ಈಗ ಟ್ರಂಪ್ ಭಾರತದ ಉತ್ಪನ್ನಗಳ ಮೇಲೆ ತೆರಿಗೆಯನ್ನು ಹೆಚ್ಚಿಸಿದರೆ, ಫಾರ್ವಸೂಟಿಕಲ್ ಮತ್ತು ಐಟಿ ಕ್ಷೇತ್ರಕ್ಕೆ ಹೆಚ್ಚಿನ ಹೊಡೆತ ಬೀಳಲಿದೆ.

ಫೆಬ್ರವರಿಯಲ್ಲಿ ಮೋದಿ ಅಮೆರಿಕ ಪ್ರವಾಸ?: ಸೋಮವಾರ ರಾತ್ರಿ ಟ್ರಂಪ್ ಜತೆ ದೂರವಾಣಿ ಚರ್ಚೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿಯಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳುವುದು ಬಹುತೇಕ ಖಚಿತವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಟ್ರಂಪ್ ‘ಭಾರತದೊಂದಿಗೆ ನಾವು ಉತ್ತಮ ಬಾಂಧವ್ಯ ಹೊಂದಿದ್ದೇವೆ. ಮೋದಿಯವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದೆ. ಅವರು ಶ್ವೇತ ಭವನಕ್ಕೆ ಭೇಟಿ ನೀಡಲಿದ್ದಾರೆ. ಬಹುತೇಕ ಫೆಬ್ರವರಿಯಲ್ಲಿ ಅಮೆರಿಕ ಪ್ರವಾಸಕ್ಕೆ ಆಗಮಿಸಬಹುದು. ಅಕ್ರಮ ವಲಸಿಗರನ್ನು ವಾಪಸ್ ಕರೆಸಿಕೊಳ್ಳುವ ಸಂಬಂಧ ಮೋದಿ ಸರಿಯಾದ ತೀರ್ಮಾನ ತೆಗೆದುಕೊಳ್ಳಲಿದ್ದಾರೆ’ ಎಂದರು. ಟ್ರಂಪ್ ಮೊದಲ ಅವಧಿಯಲ್ಲೂ ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. 2019ರ ಸೆಪ್ಟೆಂಬರ್​ನಲ್ಲಿ ಮೋದಿ ಅಮೆರಿಕಕ್ಕೆ ತೆರಳಿದ್ದಾಗ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 2020ರ ಫೆಬ್ರವರಿಯಲ್ಲಿ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದರು. ಅಹಮದಾಬಾದ್​ನಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸ ಲಾಗಿತ್ತು. ಈ ಹಿನ್ನೆಲೆಯಲ್ಲಿ ಟ್ರಂಪ್ 2.0 ನಲ್ಲೂ ಬಾಂಧವ್ಯ ಮುಂದುವರಿ ಯುವ ನಿರೀಕ್ಷೆ ಇದೆ. ಇದಕ್ಕೆ ಪೂರಕವಾಗಿ ಟ್ರಂಪ್ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಟ್ರಂಪ್ ಸರ್ಕಾರದ ಉನ್ನತ ಪ್ರತಿನಿಧಿಗಳ ಜತೆ ಸರಣಿ ಸಭೆ ನಡೆಸಿದ್ದರು.

ಭಾರತದ ಅಕ್ರಮ ವಲಸಿಗರು ಇಳಿಕೆ: ಅಮೆರಿಕದ ಆಂತರಿಕ ಭದ್ರತಾ ಇಲಾಖೆ 2024ರ ಏಪ್ರಿಲ್​ನಲ್ಲಿ ಬಿಡುಗಡೆ ಮಾಡಿದ್ದ ಅಂಕಿ-ಅಂಶಗಳ ಪ್ರಕಾರ ಅಮೆರಿಕದಲ್ಲಿರುವ ಭಾರತೀಯ ಅಕ್ರಮ ವಲಸಿಗರ ಸಂಖ್ಯೆ2022 ರಲ್ಲಿ 2.2 ಲಕ್ಷ ಇತ್ತು. ಆದರೆ, 2018 ರಲ್ಲಿ ಇದು 4.8 ಲಕ್ಷ ಆಗಿತ್ತು. ನಾಲ್ಕು ವರ್ಷದಲ್ಲಿ ಇವರ ಸಂಖ್ಯೆ ಶೇ.54 ರಷ್ಟು ಕಡಿಮೆಯಾಗಿದೆ. ಅಮೆರಿಕದಲ್ಲಿರುವ ಅಕ್ರಮ ವಲಸಿಗರಲ್ಲಿ ಮೆಕ್ಸಿಕೋದವರ ಸಂಖ್ಯೆ 48.1 ಲಕ್ಷ ಇದ್ದರೆ, ನಂತರದ ಸ್ಥಾನದಲ್ಲಿ ಗ್ವಾಟೆಮಾಲಾ (7.50 ಲಕ್ಷ), ಎಲ್ ಸೆಲ್ವಡಾರ್ (7.10 ಲಕ್ಷ), ಹೊಂಡುರಾಸ್ (5.60 ಲಕ್ಷ) ಫಿಲಿಫೈನ್ಸ್ (3.50 ಲಕ್ಷ), ವೆನುಜುವೆಲಾ (3.20 ಲಕ್ಷ) ಕೊಲಂಬಿಯಾ ಮತ್ತು ಬ್ರೆಜಿಲ್ ತಲಾ 2.30 ಲಕ್ಷದೊಂದಿಗೆ ನಂತರದ ಸ್ಥಾನದಲ್ಲಿವೆ.