ನ್ಯೂಸ್

ಮುಂದುವರೆದ ಟ್ರಂಪ್ ಸುಂಕ ಸಮರ: ಔಷಧಿಗಳ ಆಮದಿನ ಮೇಲೆ ಶೇ. 100ರಷ್ಟು ಸುಂಕ ಘೋಷಿಸಿದ ಟ್ರಂಪ್| Donald Trump

Donald Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸುಂಕ ಸಮರವನ್ನು ಮುಂದುವರೆಸಿದ್ದು, ಗುರುವಾರ(ಸೆ. 25) ಬ್ರಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಆಮದಿನ ಮೇಲೆ ಶೇ. 100 ರಷ್ಟು ಸುಂಕವನ್ನು ಘೋಷಿಸಿದ್ದಾರೆ. ಇದರಿಂದ ಭಾರತೀಯ ಔಷಧಿಯ ವಲಯದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು (ಸೆ. 26) ವರದಿಯಾಗಿದೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಟ್ರೂತ್​ನಲ್ಲಿ ಪೋಸ್ ಮಾಡಿರುವ ಡೋನಾಲ್ಡ್ ಟ್ರಂಪ್,  2025 ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಯಾವುದೇ ಕಂಪನಿಯು ಅಮೆರಿಕಾದಲ್ಲಿ ತನ್ನ ಔಷಧ ಉತ್ಪಾದನಾ ಘಟಕ ನಿರ್ಮಿಸದ ಹೊರೆತು, ಅಂತಹ ಕಂಪನಿಗಳ  ಬ್ರಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಮೇಲೆ ಶೇ. 100ರಷ್ಟು ಸುಂಕ ವಿಧಿಸುತ್ತೇನೆ ಎಂದು ಘೋಷಿಸಿದ್ದಾರೆ.

ಹಾಗೆಯೇ ಅಡುಗೆಮನೆ ಕ್ಯಾಬಿನೆಟ್‌ಗಳು, ಸ್ನಾನಗೃಹದ ವ್ಯಾನಿಟಿಗಳು ಮತ್ತು ಸಂಬಂಧಿತ ಉತ್ಪನ್ನಗಳ ಮೇಲೆ 50% ಸುಂಕ ವಿಧಿಸಿದ್ದು, ಹೆಚ್ಚುವರಿಯಾಗಿ ಅಪ್ಹೋಲ್ಟರ್ಡ್ ಪೀಠೋಪಕರಣಗಳ ಮೇಲೆ 30% ಸುಂಕವನ್ನು ವಿಧಿಸುವುದಾಗಿ ಘೋಷಿಸಿದ್ದಾರೆ.

ಸುಂಕ ವಿಧಿಸುವ ಕುರಿತು ಸ್ಪಷ್ಟನೆ ನೀಡಿರುವ ಅವರು, ಇತರ ಹೊರಗಿನ ದೇಶಗಳಿಂದ ಈ ಎಲ್ಲಾ ಉತ್ಪನ್ನಗಳು ಯುನೈಟೆಡ್ ಸ್ಟೇಟ್ಸ್‌ಗೆ ದೊಡ್ಡ ಪ್ರಮಾಣದಲ್ಲಿ ಪ್ರವಾಹದ ರೀತಿಯಲ್ಲಿ ಆಮದಾಗುತ್ತಿವೆ. ಇದು ತುಂಬಾ ಅನ್ಯಾಯದ ಅಭ್ಯಾಸ. ರಾಷ್ಟ್ರೀಯ ಭದ್ರತೆ ಮತ್ತು ಇತರ ಕಾರಣಗಳಿಗಾಗಿ ನಾವು ನಮ್ಮ ಉತ್ಪಾದನಾ ಪ್ರಕ್ರಿಯೆಯನ್ನು ರಕ್ಷಿಸಬೇಕು. ಈ ಹಿನ್ನೆಲೆ ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ.

ಔಷಧಗಳ ಆಮದಿನ ಮೇಲೆ ಸುಂಕದಿಂದ ಭಾರತದ ಮೇಲೆ ಪರಿಣಾಮ

ಭಾರತೀಯ ಔಷಧೀಯ ಸರಕುಗಳಿಗೆ ಅಮೆರಿಕ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿದೆ. 2024ರ ಹಣಕಾಸು ವರ್ಷದಲ್ಲಿ ಭಾರತ $27.9 ಶತಕೋಟಿ ಮೌಲ್ಯದ ಔಷಧ ರಪ್ತು ಮಾಡಿದ್ದು, ಅದರಲ್ಲಿ ಶೇಕಡಾ 31 ಅಥವಾ $8.7 ಶತಕೋಟಿ (ರೂ. 7,72,31 ಕೋಟಿ) ಅಮೆರಿಕಕ್ಕೆ ಹೋಗಿದೆ ಎಂದು ಕೈಗಾರಿಕಾ ಸಂಸ್ಥೆಯಾದ ಫಾರ್ಮಾಸ್ಯುಟಿಕಲ್ಸ್ ಎಕ್ಸ್‌ಪೋರ್ಟ್ ಪ್ರಮೋಷನ್ ಕೌನ್ಸಿಲ್ ಆಫ್ ಇಂಡಿಯಾ ತಿಳಿಸಿದೆ.

2025 ರ ಮೊದಲಾರ್ಧದಲ್ಲಿ ಮಾತ್ರ $3.7 ಶತಕೋಟಿ (ರೂ. 32,505 ಕೋಟಿ) ಮೌಲ್ಯದ ಔಷಧ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಅಮೆರಿಕದಲ್ಲಿ ಬಳಸುವ ಜೆನೆರಿಕ್ ಔಷಧಿಗಳಲ್ಲಿ ಶೇ.45 ಕ್ಕಿಂತ ಹೆಚ್ಚು ಮತ್ತು ಬಯೋಸಿಮಿಲರ್ ಔಷಧಿಗಳಲ್ಲಿ ಶೇ.15 ಕ್ಕಿಂತ ಹೆಚ್ಚು ಭಾರತ ಪೂರೈಸುತ್ತದೆ. ಡಾ. ರೆಡ್ಡೀಸ್, ಅರಬಿಂದೋ ಫಾರ್ಮಾ, ಜೈಡಸ್ ಲೈಫ್ ಸೈನ್ಸಸ್, ಸನ್ ಫಾರ್ಮಾ ಮತ್ತು ಗ್ಲಾಂಡ್ ಫಾರ್ಮಾದಂತಹ ಸಂಸ್ಥೆಗಳು ತಮ್ಮ ಒಟ್ಟು ಆದಾಯದ ಶೇ.30-50 ರಷ್ಟು ಹಣವನ್ನು ಅಮೆರಿಕನ್ ಮಾರುಕಟ್ಟೆಯಿಂದ ಗಳಿಸುತ್ತಿವೆ ಎಂದು ವರದಿಯಾಗಿದೆ.

ಅಮೆರಿಕದ ಗ್ರಾಹಕರು ಭಾರತದಲ್ಲಿ ತಯಾರಾಗುವ ಕಡಿಮೆ ಬೆಲೆಯ ಜೆನೆರಿಕ್‌ಗಳನ್ನು ಅವಲಂಬಿಸಿದ್ದಾರೆ. ಆದರೆ ಟ್ರಂಪ್ ಅವರ  ಈ ಸುಂಕವು ಮುಖ್ಯವಾಗಿ ಬಹುರಾಷ್ಟ್ರೀಯ ದೈತ್ಯ ಕಂಪನಿಗಳಿಂದ ಪ್ರಾಬಲ್ಯ ಹೊಂದಿರುವ ಬ್ರಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಿಗಳನ್ನು ಗುರಿಯಾಗಿಸಿಕೊಂಡಂತೆ ಕಂಡುಬಂದರೂ, ಭಾರತದ ಸಂಕೀರ್ಣ ಜೆನೆರಿಕ್ ಮತ್ತು ವಿಶೇಷ ಔಷಧಿಗಳ ರಪ್ತಿನ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. (ಏಜೆನ್ಸೀಸ್)