ನ್ಯೂಸ್

Deepawali ಶುಭಾಶಯ ಕೋರಿದ ವಿಶ್ವನಾಯಕರು; ಕತ್ತಲೆಯ ಮೇಲೆ ಬೆಳಕಿನ ವಿಜಯ ಎಂದು ಬಣ್ಣನೆ

Delhi: ದೇಶ್ಯಾದ್ಯಂತ ದೀಪಾವಳಿ(Deepawali) ಹಬ್ಬದ ಸಂಭ್ರಮಾಚರಣೆ ಜೋರಾಗಿದ್ದು, ದೀಪಗಳು, ಪಟಾಕಿಗಳು ಮನೆ ಮತ್ತು ಬೀದಿಗಳನ್ನು ಬೆಳಗಿಸುತ್ತಿವೆ. ಹಬ್ಬದ ನಿಮಿತ್ತ ಪರಸ್ಪರ ಶುಭಾಶಯ ವಿನಿಮಯವಾಗುತ್ತಿದ್ದು, ಭಾರತವಷ್ಟೆ ಅಲ್ಲದೇ ಅಮೆರಿಕ, ಇಸ್ರೇಲ್, ಕೆನಡಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನ ವಿಶ್ವ ನಾಯಕರು ಶುಭಾಶಯಗಳನ್ನು ಕೋರಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ಹಲವಾರು ರಾಜತಾಂತ್ರಿಕರು ದೀಪಾವಳಿಯ ಸಾರವನ್ನು ಆಚರಿಸುವ ಶುಭಾಶಯಗಳನ್ನು ತಿಳಿಸಿದ್ದಾರೆ.

ಶ್ವೇತಭವನ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಳಕಿನ ಹಬ್ಬವನ್ನು ಆಚರಿಸುವ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದ್ದಾರೆ. ಇಂದು, ದೀಪಾವಳಿಯನ್ನು ಆಚರಿಸುವ ಪ್ರತಿಯೊಬ್ಬ ಅಮೆರಿಕನ್ನರಿಗೂ ನಾನು ನನ್ನ ಶುಭಾಶಯಗಳನ್ನು ಕಳುಹಿಸುತ್ತೇನೆ, ಲಕ್ಷಾಂತರ ನಾಗರಿಕರು ದೀಪಗಳು ಮತ್ತು ಲ್ಯಾಂಟರ್ನ್‌ಗಳನ್ನು ಬೆಳಗಿಸುತ್ತಿದ್ದಂತೆ, ಒಳ್ಳೆಯದು ಯಾವಾಗಲೂ ಕೆಟ್ಟದ್ದರ ಮೇಲೆ ಜಯಗಳಿಸುತ್ತದೆ ಎಂಬ ಶಾಶ್ವತ ಸತ್ಯದಲ್ಲಿ ನಾವು ಸಂತೋಷಪಡುತ್ತೇವೆ. ದೀಪಾವಳಿಯನ್ನು ಆಚರಿಸುವ ಪ್ರತಿಯೊಬ್ಬ ಅಮೆರಿಕನ್ನರಿಗೂ, ಈ ಆಚರಣೆಯು ಶಾಶ್ವತ ಪ್ರಶಾಂತತೆ, ಸಮೃದ್ಧಿ, ಭರವಸೆ ಮತ್ತು ಶಾಂತಿಯನ್ನು ತರಲಿ ಎಂದು ಬರೆದುಕೊಂಡಿದ್ದಾರೆ.

ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ನಿರ್ದೇಶಕ ಕಾಶ್ ಪಟೇಲ್ ಅವರು ಎಕ್ಸ್‌ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ದೀಪಾವಳಿಯ ಶುಭಾಶಯಗಳು, ಕೆಟ್ಟದ್ದರ ಮೇಲೆ ಒಳ್ಳೆಯದು ಜಯಗಳಿಸಿದಂತೆ ಪ್ರಪಂಚದಾದ್ಯಂತ ಬೆಳಕಿನ ಹಬ್ಬವನ್ನು ಆಚರಿಸಲಾಗುತ್ತದೆ

ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದು, ಎಲ್ಲರ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಗಾಗಿ ಹಾರೈಸಿದೆ. ವಾಷಿಂಗ್ಟನ್‌ನ ಇಂಡಿಯಾ ಹೌಸ್‌ನಲ್ಲಿ ನಡೆದ ಆಚರಣೆಗಳಲ್ಲಿ ಅಮೆರಿಕ ಅಧ್ಯಕ್ಷರ ವಿಶೇಷ ರಾಯಭಾರಿ ಸೆರ್ಗಿಯೊ ಗೋರ್ ಮತ್ತು ಅಮೆರಿಕದಲ್ಲಿನ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಭಾಗವಹಿಸಿದ್ದರು. ಭಾರತಕ್ಕೆ ಭೇಟಿ ನೀಡುವ ಮೊದಲು ದೀಪಾವಳಿ ಆಚರಣೆಗಾಗಿ ನಿನ್ನೆ ಇಂಡಿಯಾ ಹೌಸ್‌ನಲ್ಲಿ ರಾಯಭಾರಿ ಮತ್ತು ವಿಶೇಷ ರಾಯಭಾರಿ ಅವರ ಆತಿಥ್ಯ ವಹಿಸಲು ಸಂತೋಷವಾಗಿದೆ ಎಂದು ಕ್ವಾತ್ರಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರಧಾನಿ ಮೋದಿ ಮತ್ತು ಭಾರತಕ್ಕೆ ದೀಪಾವಳಿ ಶುಭಾಶಯಗಳನ್ನು ತಿಳಿಸಿದ ನೇತನ್ಯಹು

ಇಸ್ರೆಲ್​ ಪ್ರಧಾನಿ ಬೆಂಜಮಿನ್ ನೆತನ್ಯಾಹು ನರೇಂದ್ರ ಮೋದಿ ಮತ್ತು ಭಾರತದ ಜನರಿಗೆ ಶುಭಾಶಯಗಳನ್ನು ಕಳುಹಿಸಿದ್ದಾರೆ. ನನ್ನ ಸ್ನೇಹಿತ ನರೇಂದ್ರ ಮೋದಿ ಮತ್ತು ಭಾರತದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು! ಬೆಳಕಿನ ಹಬ್ಬವು ನಿಮ್ಮ ಮಹಾನ್ ರಾಷ್ಟ್ರಕ್ಕೆ ಭರವಸೆ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ಇಸ್ರೇಲ್ ಮತ್ತು ಭಾರತ ಒಟ್ಟಾಗಿ ನಿಲ್ಲುತ್ತವೆ - ನಾವೀನ್ಯತೆ, ಸ್ನೇಹ, ರಕ್ಷಣೆ ಮತ್ತು ಉಜ್ವಲ ಭವಿಷ್ಯದಲ್ಲಿ ಪಾಲುದಾರರು ಎಂದು ನೆತನ್ಯಾಹು ಹೇಳಿದರು. ಭಾರತದಾದ್ಯಂತ ಲಕ್ಷಾಂತರ ಜನರು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಆಚರಿಸಲು ತಮ್ಮ ದೀಪಗಳನ್ನು ಬೆಳಗಿಸುತ್ತಿರುವಾಗ, ಇಸ್ರೇಲ್ ಶಾಂತಿ, ನವೀಕರಣ ಮತ್ತು ಭರವಸೆಗಾಗಿ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ. ಜೆರುಸಲೆಮ್‌ನಿಂದ ದೆಹಲಿ ಮತ್ತು ಅದರಾಚೆಗೆ, ಈ ಹಬ್ಬವು ಉಜ್ವಲ ನಾಳೆಯ ಬಗ್ಗೆ ನಂಬಿಕೆಯನ್ನು ಪ್ರೇರೇಪಿಸಲಿ ಎಂದು ಇಸ್ರೇಲ್ ಅಧಿಕೃತ ಸಂದೇಶವನ್ನು ಬಿಡುಗಡೆ ಮಾಡಿದೆ.

ಭಾರತದಲ್ಲಿರುವ ಇಸ್ರೇಲಿ ರಾಯಭಾರಿ ರ್ಯೂವೆನ್ ಅಜರ್ ಅವರು ವೀಡಿಯೊ ಸಂದೇಶವನ್ನು ಹಂಚಿಕೊಂಡಿದ್ದು, ನನ್ನ ಎಲ್ಲಾ ಭಾರತೀಯ ಸ್ನೇಹಿತರಿಗೆ ದೀಪಾವಳಿಯ ಶುಭಾಶಯಗಳು! ಈ ವಿಶೇಷ ಸಂದರ್ಭವು ನಿಮ್ಮ ಜೀವನವನ್ನು ಉತ್ತಮ ಆರೋಗ್ಯ ಮತ್ತು ಸಂತೋಷದಿಂದ ಬೆಳಗಿಸಲಿ. ಈ ಸಮಯದಲ್ಲಿ, ಒತ್ತೆಯಾಳುಗಳ ಮರಳುವಿಕೆ ಮತ್ತು ಪ್ರೀತಿಪಾತ್ರರೊಂದಿಗಿನ ಅವರ ಹೃತ್ಪೂರ್ವಕ ಪುನರ್ಮಿಲನದಲ್ಲಿ ನಾವು ಸಂತೋಷಪಡುತ್ತೇವೆ."

ಕೆನಡಾ, ಯುಕೆ ಮತ್ತು ಯುಎಇ ದೀಪಾವಳಿ ಆಚರಣೆ..

ದೀಪಾವಳಿ ಶುಭಾಶಯಗಳನ್ನು ತಿಳಿಸುವವರ ಸಾಲಿನಲ್ಲಿ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಕೂಡ ಸೇರಿಕೊಂಡಿದ್ದು, ಇಂದು ರಾತ್ರಿ, ಕೆನಡಾದಾದ್ಯಂತ ಕುಟುಂಬಗಳು ದೀಪಗಳನ್ನು ಬೆಳಗಿಸಿ ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಆಚರಿಸುತ್ತವೆ. ಕೆಟ್ಟದ್ದರ ಮೇಲೆ ಒಳ್ಳೆಯದಾಗಿದೆ. ದೀಪಾವಳಿಯನ್ನು ಆಚರಿಸುವ ಎಲ್ಲರಿಗೂ ಬೆಳಕಿನ ಹಬ್ಬವನ್ನು ಸಂತೋಷದಾಯಕವಾಗಿ ಹಾರೈಸುತ್ತೇನೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಯುನೈಟೆಡ್ ಕಿಂಗ್‌ಡಂನಲ್ಲಿ, ಪ್ರಧಾನಿ ಕೀರ್ ಸ್ಟಾರ್ಮರ್ ಬ್ರಿಟನ್‌ನಾದ್ಯಂತ ಹಿಂದೂ, ಜೈನ ಮತ್ತು ಸಿಖ್ ಸಮುದಾಯಗಳಿಗೆ ಶುಭಾಶಯಗಳನ್ನು ಕೋರಿದರು. ಬ್ರಿಟನ್‌ನಾದ್ಯಂತ ಹಿಂದೂಗಳು, ಜೈನರು ಮತ್ತು ಸಿಖ್ಖರಿಗೆ ಸಂತೋಷದಾಯಕ ಮತ್ತು ಶಾಂತಿಯುತ ದೀಪಾವಳಿ ಮತ್ತು ಬಂಡಿ ಛೋರ್ ದಿವಸ್ ಶುಭಾಶಯಗಳು ಎಂದು ಸ್ಟಾರ್ಮರ್ ಸಂದೇಶದಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿನ ಯುನೈಟೆಡ್ ಅರಬ್ ಎಮಿರೇಟ್ಸ್ ರಾಯಭಾರಿ ಅಬ್ದುಲ್ನಾಸರ್ ಅಲ್ಶಾಲಿ, ದೀಪಾವಳಿಯು ಭಾರತದಲ್ಲಿ ತಮ್ಮ ಜೀವನದ ಅರ್ಥಪೂರ್ಣ ಭಾಗವಾಗಿದೆ ಎಂದು ಹಂಚಿಕೊಂಡರು. ದೀಪಾವಳಿಯು ಮೊದಲಿನಿಂದಲೂ ಭಾರತದಲ್ಲಿ ನನ್ನ ಪ್ರಯಾಣದ ಒಂದು ಭಾಗವಾಗಿದೆ, ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿಯನ್ನು ಹಾರೈಸುತ್ತೇನೆ ಎಂದು ಹೇಳಿದರು.(ಏಜೆನ್ಸೀಸ್​)