ನ್ಯೂಯಾರ್ಕ್: ಅಮೆರಿಕದಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳಿಂದ(Nuclear Testing) ನಾವು ಭೂಮಿಯನ್ನು 150 ಬಾರಿ ಸ್ಫೋಟಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಈ ಬಗ್ಗೆ ಮಿಯಾಮಿಯಲ್ಲಿ ನಡೆದ ಅಮೇರಿಕನ್ ಬ್ಯುಸಿನೆಸ್ ಫೋರಂ ಸಮ್ಮೇಳನದಲ್ಲಿ ಮಾತನಾಡಿದ ಟ್ರಂಪ್, ಪರಮಾಣು ನಿಶ್ಯಸ್ತ್ರೀಕರಣವು ಒಂದು ಉತ್ತಮ ವಿಷಯವಾಗಿದೆ ಎಂದಿದ್ದಾರೆ. ಮೂರು ದಶಕಗಳ ವಿರಾಮದ ನಂತರ ಅಮೆರಿಕವು ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನು ಪುನರಾರಂಭಿಸಿದೆ. ಈ ನಿರ್ಧಾರವು ಪ್ರಪಂಚದಾದ್ಯಂತ ರಾಜಕೀಯ ಉದ್ವಿಗ್ನತೆಯನ್ನು ಮತ್ತೆ ಉಂಟುಮಾಡಿದೆ.
ರಷ್ಯಾದ ಅಧ್ಯಕ್ಷ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ರೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಿರುವುದಾಗಿ ಟ್ರಂಪ್ ಹೇಳಿದ್ದು, ವಿಶ್ವದ ಅನೇಕ ದೇಶಗಳು ಈಗಾಗಲೇ ಪರಮಾಣು ಪರೀಕ್ಷೆಗಳನ್ನು ನಡೆಸುತ್ತಿವೆ. ರಷ್ಯಾ, ಚೀನಾ, ಉತ್ತರ ಕೊರಿಯಾ ಮತ್ತು ಪಾಕಿಸ್ತಾನದಂತಹ ದೇಶಗಳು ನಿರಂತರವಾಗಿ ಪರಮಾಣು ಪರೀಕ್ಷೆಗಳನ್ನು ಮಾಡುತ್ತಿವೆ. ಆದರೆ, ಅವರು ಇದನ್ನು ಸಾರ್ವಜನಿಕವಾಗಿ ಹೇಳುತ್ತಿಲ್ಲ. ನಾವು ಯಾವಾಗಲೂ ಪಾರದರ್ಶಕವಾಗಿರುತ್ತೇವೆ. ಬೇರೆ ಯಾರೂ ಮಾತನಾಡದ ಕೆಲಸವನ್ನು ನಾವು ಮಾಡುತ್ತೇವೆ, ನಾವು ಬಹಿರಂಗವಾಗಿ ಮಾಡುತ್ತೇವೆ ಎಂದು ಟ್ರಂಪ್ ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಟ್ರಂಪ್, ಇಷ್ಟು ವರ್ಷಗಳಿಂದ ನಾವು ತಾಳ್ಮೆಯಿಂದ ಇದ್ದೇವೆ. ಇತರ ದೇಶಗಳು ಪರಮಾಣು ಪರೀಕ್ಷೆಗಳನ್ನು ನಡೆಸಿವೆ. ಆದರೆ ನಾವು ಅವುಗಳನ್ನು ನಿರ್ಲಕ್ಷಿಸಿದ್ದೇವೆ. ಆದರೆ ಇನ್ನು ಮುಂದೆ ಹಾಗೆ ಮೌನವಾಗಿರಲು ನಮಗೆ ಯಾವುದೇ ಉದ್ದೇಶವಿಲ್ಲ. ನಾವು ಪ್ರಪಂಚದ ಉಳಿದ ಭಾಗಗಳಿಗೆ ಸಮಾನವಾಗಿ ಪರಮಾಣು ಪರೀಕ್ಷೆಗಳನ್ನು ನಡೆಸುತ್ತೇವೆ.
ರಷ್ಯಾ ಮತ್ತು ಚೀನಾ ಹೆಚ್ಚಿನ ಸಂಖ್ಯೆಯ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿವೆ. ಆದರೆ ನಮ್ಮಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳಿಂದ, ನಾವು ಈ ಭೂಮಿಯನ್ನು 150 ಬಾರಿ ಸ್ಫೋಟಿಸಬಹುದು. ಅಲ್ಲದೆ, ಪರಮಾಣು ನಿಶ್ಯಸ್ತ್ರೀಕರಣದ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ರೊಂದಿಗೆ ಚರ್ಚಿಸಿದ್ದೇನೆ ಎಂದು ಟ್ರಂಪ್ ತಿಳಿಸಿದ್ದಾರೆ. ಅಮೆರಿಕದ ಪರಮಾಣು ಪರೀಕ್ಷೆಗಳನ್ನು ಯಾವಾಗ ಮತ್ತು ಎಲ್ಲಿ ನಡೆಸಲಾಗುವುದು ಎಂಬುದರ ಕುರಿತು ಯಾವುದೇ ವಿವರಗಳನ್ನು ಟ್ರಂಪ್ ಬಹಿರಂಗಪಡಿಸಿಲ್ಲ.
ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ರೊಂದಿಗಿನ ಮುಂಬರುವ ಸಭೆಗೆ ಮುಂಚಿತವಾಗಿ, ಟ್ರುತ್ ಸೋಷಿಯಲ್ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ನಾನು ಅಧಿಕಾರದಲ್ಲಿದ್ದಾಗ, ನಾವು ಪರಮಾಣು ಪರೀಕ್ಷೆಯನ್ನು ನಿಲ್ಲಿಸಿದ್ದೇವೆ. ಪರಮಾಣು ಶಸ್ತ್ರಾಸ್ತ್ರಗಳ ವಿನಾಶಕಾರಿ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಆದರೆ, ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ರಷ್ಯಾ ಮತ್ತು ಚೀನಾ ಸೇರಿದಂತೆ ಹಲವು ದೇಶಗಳು ತಮ್ಮ ಪರಮಾಣು ಸಾಮರ್ಥ್ಯಗಳನ್ನು ವೇಗವಾಗಿ ಹೆಚ್ಚಿಸುತ್ತಿವೆ. ಮುಂದಿನ ಐದು ವರ್ಷಗಳಲ್ಲಿ, ಅಮೆರಿಕ, ರಷ್ಯಾ ಮತ್ತು ಚೀನಾ ಅದೇ ಮಟ್ಟವನ್ನು ತಲುಪುವ ಸಾಧ್ಯತೆಯಿದೆ. ಇದಕ್ಕಾಗಿಯೇ ಅಮೆರಿಕವು ಪರಮಾಣು ಪರೀಕ್ಷೆಯನ್ನು ಪುನರಾರಂಭಿಸುವ ಸಮಯ ಬಂದಿದೆ ಎಂದು ಟ್ರಂಪ್ ಹೇಳಿದ್ದಾರೆ. (ಏಜೆನ್ಸೀಸ್)