Donald Trump: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ದ ಸೇರಿದಂತೆ ವಿಶ್ವದ ಹಲವಾರು ಹಳೆಯ ವಿವಾದಗಳನ್ನು ಪರಿಹರಿಸುವಲ್ಲಿ ನಾನು ನಿರ್ಣಾಯಕ ಪಾತ್ರ ವಹಿಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಈ ಬಗ್ಗೆ ಮಧ್ಯಪ್ರಾಚ್ಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಮಾತನಾಡಿದ ಟ್ರಂಪ್, ಇತ್ತೀಚೆಗೆ ಗಾಜಾ ಸಂಘರ್ಷದಲ್ಲಿ ನಡೆದ ಕದನ ವಿರಾಮವನ್ನು ತಾವು ಪರಿಹರಿಸಿದ ಎಂಟನೇ ಯುದ್ಧ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಇದು ನಾನು ಪರಿಹರಿಸಿದ ನನ್ನ 8 ನೇಯ ಯುದ್ಧವಾಗಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಇದೀಗ ಸಂಘರ್ಷ ನಡೆಯುತ್ತಿದೆ ಮತ್ತು ನಾನು ಹಿಂತಿರುಗಿದಾಗ ಇದನ್ನು ಪರಿಹರಿಸುತ್ತೇನೆ. ನಾನು ಯುದ್ಧಗಳನ್ನು ಪರಿಹರಿಸುವಲ್ಲಿ ಪರಿಣಿತನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಭಾರತ-ಪಾಕಿಸ್ತಾನ ಯುದ್ಧವನ್ನು ಉಲ್ಲೇಖಿಸಿ ಮಾತನಾಡಿದ ಟ್ರಂಪ್, ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಯೋಚಿಸಿ. ಕೆಲವು ಯುದ್ಧಗಳು 31, 32 ಅಥವಾ 37 ವರ್ಷಗಳ ಕಾಲ ನಡೆದಿವೆ. ಯುದ್ದದಲ್ಲಿ ಲಕ್ಷಾಂತರ ಜನರು ಸತ್ತರು, ಮತ್ತು ನಾನು ಇವುಗಳಲ್ಲಿ ಹೆಚ್ಚಿನದನ್ನು ಒಂದೇ ದಿನದಲ್ಲಿ ಪರಿಹರಿಸಿದೆ ಎಂದಿದ್ದಾರೆ. ಅಲ್ಲದೆ, ವ್ಯಾಪಾರ ಮತ್ತು ಸುಂಕಗಳಂತಹ ಆರ್ಥಿಕ ಕ್ರಮಗಳ ಮೂಲಕ ಕೆಲವು ಸಂಘರ್ಷಗಳನ್ನು ಪರಿಹರಿಸಲಾಗಿದೆ ಎಂದು ಟ್ರಂಪ್ ಮತ್ತೊಮ್ಮೆ ಹೇಳಿದ್ದಾರೆ.
ಇದನ್ನೂ ಓದಿ: ಕರಗಿದ ಯುದ್ಧದ ಕಾರ್ಮೋಡ: 2 ವರ್ಷದ ಬಳಿಕ ಇಸ್ರೇಲಿ ಒತ್ತೆಯಾಳುಗಳಿಗೆ ಹಮಾಸ್ನಿಂದ ಬಿಡುಗಡೆ ಭಾಗ್ಯ! Israeli Hostages
ನಿಮ್ಮಲ್ಲಿ ಪರಮಾಣು ಶಸ್ತ್ರಾಸ್ತ್ರಗಳಿವೆ ಎಂದು ಹೇಳುವ ಮೂಲಕ ನಾನು ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ನಿಲ್ಲಿಸಲು ಪ್ರಯತ್ನಿಸಿದೆ. ಇಂಡೋ-ಪಾಕ್ ಯುದ್ಧಕ್ಕೆ ಹೋದರೆ, ನಾನು ನಿಮ್ಮ ಮೇಲೆ ಶೇ,100, 150, 200 ರಷ್ಟು ಸುಂಕಗಳನ್ನು ವಿಧಿಸುತ್ತೇನೆ ಎಂದಿದ್ದೆ. ಅಲ್ಲದೆ, ನಾನು ಸುಂಕಗಳನ್ನು ಹಾಕಿದೆ ಮತ್ತು ಯುದ್ಧ 24 ಗಂಟೆಗಳ ಒಳಗೆ ಇತ್ಯರ್ಥವಾಯಿತು. ಯಾವುದೇ ಸುಂಕಗಳಿಲ್ಲದಿದ್ದರೆ, ಈ ಯುದ್ಧ ಎಂದಿಗೂ ಮುಗಿಯುತ್ತಿರಲಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ.
ಆದರೆ, ಆಪರೇಷನ್ ಸಿಂಧೂರ ಮತ್ತು ಕದನ ವಿರಾಮದಲ್ಲಿ ಅಮೆರಿಕದ ಯಾವುದೇ ಪಾತ್ರವಿಲ್ಲ ಎಂದು ಭಾರತ ಸತತವಾಗಿ ಪ್ರತಿಪಾದಿಸುತ್ತಾ ಬಂದಿದೆ.
ನೊಬೆಲ್ ಶಾಂತಿ ಪ್ರಶಸ್ತಿ ಗೆಲ್ಲುವುದು ತಮ್ಮ ಗುರಿಯಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇದನ್ನು ಪಡೆಯುವುದು ಗೌರವದ ಸಂಗತಿಯಾಗಿದೆ. 2025 ರಲ್ಲಿ ನಾನು ಬಹಳಷ್ಟು ಪ್ರಮುಖ ಕೆಲಸ ಮಾಡಿದ್ದೇನೆ ಎಂದು ಕೆಲವರು ಹೇಳುತ್ತಾರೆ. ಆದರೆ ನಾನು ಇದನ್ನು ನೊಬೆಲ್‌ಗಾಗಿ ಮಾಡಲಿಲ್ಲ, ಜೀವಗಳನ್ನು ಉಳಿಸಲು ನಾನು ಇದನ್ನು ಮಾಡಿದ್ದೇನೆ ಎಂದು ಟ್ರಂಪ್ ಹೇಳಿದರು.
ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಮುಗಿದಿದೆ ಎಂದು ನಿಮಗೆ ಖಚಿತವಾಗಿದೆಯೇ ಎಂದು ಟ್ರಂಪ್ ಅವರನ್ನು ಕೇಳಿದಾಗ, ಅವರು ಯುದ್ಧ ಮುಗಿದಿದೆ ಎಂದಿದ್ದಾರೆ.
ತಮ್ಮ ಭೇಟಿಯ ಮಹತ್ವದ ಬಗ್ಗೆ ಮಾತನಾಡಿದ ಟ್ರಂಪ್, ಇದು ವಿಶೇಷ ಕಾರ್ಯಕ್ರಮವಾಗಿದೆ. ಸಾಮಾನ್ಯವಾಗಿ, ಒಂದು ಕಡೆ ಸಂತೋಷವಾಗಿದ್ದರೆ, ಇನ್ನೊಂದು ಕಡೆ ಸಂತೋಷವಾಗಿರುವುದಿಲ್ಲ. ಎಲ್ಲರೂ ಆಶ್ಚರ್ಯ ಮತ್ತು ಉತ್ಸುಕರಾಗಿರುವುದು ಇದೇ ಮೊದಲು, ನಾವು ಅದ್ಭುತ ಸಮಯವನ್ನು ಕಳೆಯಲಿದ್ದೇವೆ, ಇದು ಹಿಂದೆಂದೂ ಕಾಣದ ಕ್ಷಣವಾಗಿರುತ್ತದೆ ಎಂದು ಗಾಜಾ ಕದನ ವಿರಾಮದ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ನಾಯಕತ್ವಗಳ ನಡುವಿನ ನೇರ ಮಾತುಕತೆಯ ನಂತರ ಮೇ 2025 ರಲ್ಲಿ ಘೋಷಿಸಲಾದ ಕದನ ವಿರಾಮದಲ್ಲಿ ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಇಲ್ಲದೆ ಸಂಭವಿಸಿದೆ ಎಂಬುದು ಗಮನಾರ್ಹವಾಗಿದೆ. ಅಲ್ಲದೆ, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ನಿಲ್ಲಿಸುವಂತೆ ಯಾವುದೇ ದೇಶವು ಭಾರತವನ್ನು ವಿನಂತಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಅಮೆರಿಕದೊಂದಿಗಿನ ವ್ಯಾಪಾರ ಅಥವಾ ಸುಂಕ ಮಾತುಕತೆಗೂ ಆಪರೇಷನ್ ಸಿಂಧೂರಗೂ ಯಾವುದೇ ಸಂಬಂಧವಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. (ಏಜೆನ್ಸೀಸ್)