ನ್ಯೂಸ್

ಇದು ಎಣ್ಣೆ-ವಿನೆಗರ್​ ಬೆರೆಸಿದಂತೆ! ರಷ್ಯಾ-ಯುಕ್ರೇನ್​ ಮಧ್ಯೆ ಟ್ರಂಪ್​ ಒದ್ದಾಟ, ಭೇಟಿ ಕುರಿತು ಅಚ್ಚರಿ ಹೇಳಿಕೆ | Trump

Trump: ಆ.15ರಂದು ಅಮೆರಿಕದ ಶ್ವೇತಭವನದ ಬದಲಿಗೆ ಅಲಾಸ್ಕಾ ರಾಜ್ಯದಲ್ಲಿ ಮುಖಾಮುಖಿ ಭೇಟಿಯಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಯುಕ್ರೇನ್​ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧವನ್ನು ಕೈಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು. ಇದಾದ ಬಳಿಕ ಯುಕ್ರೇನಿಯನ್​ ಅಧ್ಯಕ್ಷ ಝೆಲೆನ್ಸ್ಕಿಯನ್ನೂ ಭೇಟಿಯಾದ ಟ್ರಂಪ್​, ಅವರೊಂದಿಗೂ ಇದೇ ವಿಷಯದ ಬಗ್ಗೆ ಚರ್ಚಿಸಿದರು. ಆದರೀಗ, ಇವರಿಬ್ಬರೊಂದಿಗೆ ನಡೆಸಿದ ಮಾತುಕತೆ ಅಂದುಕೊಂಡಂತೆ ಫಲ ನೀಡುತ್ತಿಲ್ಲ ಎನ್ನಲಾಗಿದೆ.

ನಾವು ಮೂವರು ಶೀಘ್ರದಲ್ಲೇ ಭೇಟಿ…

ಝೆಲೆನ್ಸ್ಕಿ ಜತೆಗಿನ ಭೇಟಿಯಲ್ಲಿ ಮಾತನಾಡಿದ್ದ ಟ್ರಂಪ್​, ಸುಮಾರು ನಾಲ್ಕು ವರ್ಷಗಳ ಯುದ್ಧವನ್ನು ಕೊನೆಗೊಳಿಸುವತ್ತ ಇದು ಉತ್ತಮ ಹೆಜ್ಜೆಯಾಗಿದೆ. ವಾಷಿಂಗ್ಟನ್ ಸಂಯೋಜಿಸಿದ ಯುರೋಪಿಯನ್ ರಾಷ್ಟ್ರಗಳು ಯುಕ್ರೇನ್‌ಗೆ ಭದ್ರತಾ ಖಾತರಿಗಳನ್ನು ಒದಗಿಸುವ ಅಗತ್ಯತೆಯ ಮೇಲೆ ಚರ್ಚೆಗಳು ಮುಖ್ಯವಾಗಿ ಕೇಂದ್ರೀಕರಿಸಿದವು. ರಷ್ಯಾ-ಯುಕ್ರೇನ್ ನಡುವೆ ಶಾಂತಿ ತರಲಿದ್ದೇವೆ ಎಂಬ ಸಂತೋಷ, ವಿಶ್ವಾಸ ಬಹುತೇಕ ನಾಯಕರಲ್ಲಿ ಮೂಡಿದೆ ಎಂದಿದ್ದರು. ಆದಾಗ್ಯೂ, ಮಾತುಕತೆಯ ಕೊನೆಯಲ್ಲಿ, ನಾನು ಪುಟಿನ್ ಅವರೊಂದಿಗೆ ಫೋನ್ ಕರೆಯಲ್ಲಿ ಮಾತನಾಡಿದೆ. ಝೆಲೆನ್ಸ್ಕಿ ಮತ್ತು ಪುಟಿನ್ ನಡುವೆ ಸಭೆ ನಡೆಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇವರಿಬ್ಬರು ಶೀಘ್ರದಲ್ಲೇ ಮುಖಾಮುಖಿಯಾಗಿ ಭೇಟಿಯಾಗಲಿದ್ದಾರೆ. ಇವರೊಂದಿಗೆ ನಾನೂ ಭಾಗಿಯಾಗುವೆ ಎಂದು ಹೇಳಿದ್ದರು.

ಎಣ್ಣೆ-ವಿನೆಗರ್ ಇದ್ದಂತೆ​...

ಯುದ್ಧದಲ್ಲಿ ತೊಡಗಿರುವ ರಷ್ಯಾ ಮತ್ತು ಯುಕ್ರೇನ್ ರಾಷ್ಟ್ರಗಳ ನಾಯಕರನ್ನು ಒಂದೇ ಸಭೆಯಲ್ಲಿ ಸೇರಿಸುವ ನಿಮ್ಮ​ ಮಾತು ಎಲ್ಲಿವರೆಗೆ ಬಂದಿತು ಎಂಬ ಪ್ರಶ್ನೆಗೆ ಉತ್ತರಿಸಿರುವ ಟ್ರಂಪ್​, "ಪುಟಿನ್ ಮತ್ತು ಝೆಲೆನ್ಸ್ಕಿ ಒಟ್ಟಿಗೆ ಕೆಲಸ ಮಾಡುತ್ತಾರೆಯೇ ಎಂಬುದನ್ನು ನಾವು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ನಿಮಗೆ ಗೊತ್ತಾ, ಇವರಿಬ್ಬರು ಒಂದು ರೀತಿ ಎಣ್ಣೆ ಮತ್ತು ವಿನೆಗರ್‌ನಂತೆ. ಒಂದಷ್ಟು ಕಾರಣಗಳಿಂದ ಅವರು ಹೊಂದಿಕೊಳ್ಳುವುದಿಲ್ಲ" ಎಂದು ಹೇಳಿದ್ದಾರೆ,(ಏಜೆನ್ಸೀಸ್).