ನ್ಯೂಯಾರ್ಕ್: ಅಮೆರಿಕದಲ್ಲಿರುವ ಭಾರತೀಯರು ಸ್ವದೇಶದಲ್ಲಿರುವ ತಮ್ಮ ಮನೆಗಳಿಗೆ ಕಳಿಸುವ ಹಾಗೂ ತಾಯ್ನಾಡಿನಲ್ಲಿ ಹೂಡಿಕೆ ಮಾಡುವ ದುಡ್ಡಿನ ಮೇಲೆ ಶೇಕಡ 3.5 ತೆರಿಗೆ ವಿಧಿಸುವ ‘ದಿ ಒನ್ ಬಿಗ್ ಬ್ಯೂಟಿಫುಲ್ ಬಿಲ್’ ಎಂಬ ಮಸೂದೆಗೆ ಅಮೆರಿಕದ ಸಂಸತ್ತು ಮೇ 22ರಂದು ಅನುಮೋದನೆ ನೀಡಿದೆ.
ಹೊಸ ತೆರಿಗೆ 2026ರ ಜನವರಿ 1ರಿಂದ ಅನ್ವಯವಾಗಲಿದೆ. ಇದರಿಂದ ಅಮೆರಿಕದ ಬೊಕ್ಕಸಕ್ಕೆ ವಾರ್ಷಿಕ 8 ಸಾವಿರ ಕೋಟಿ ರೂ.ಆಗ ಆದಾಯ ಬರಲಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇಕಡ 5ರಷ್ಟು ತೆರಿಗೆ ವಿಧಿಸಲು ಮುಂದಾಗಿದ್ದರಾದರೂ, ಅಂತಿಮವಾಗಿ ಶೇ.3.5ರಷ್ಟು ತೆರಿಗೆ ವಿಧಿಸಲಾಗಿದೆ.
ಇದರಿಂದ ಭಾರತದಲ್ಲಿ ನೆಲೆಸಿರುವ ಲಕ್ಷಾಂತರ ಕುಟುಂಬಗಳ ಖರ್ಚುವೆಚ್ಚದ ಮೇಲೆ ನೇರ ಪರಿಣಾಮ ಆಗಲಿದೆ. ಈ ಮಸೂದೆ ಭಾರತೀಯರಿಗೆ ಮಾತ್ರ ಸೀಮಿತವಲ್ಲ, ಅಲ್ಲಿ ನೆಲೆಸಿರುವ ಬೇರೆ ದೇಶಗಳ ನಾಗರಿಕರಿಗೂ ಅನ್ವಯವಾಗುತ್ತದೆ. ಆದರೆ ಹೆಚ್ಚಿನ ಪರಿಣಾಮ ಆಗುವುದು ಭಾರತೀಯರಿಗೇ. ಏಕೆಂದರೆ ಮನೆಗೆ ಹಣ ಕಳಿಸುವವರಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚು. ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ (ಜಿಟಿಆರ್ಐ) ಅಭಿಪ್ರಾಯಪಟ್ಟಿದೆ.
ಏನಿದು ಮಸೂದೆ?: ಟ್ರಂಪ್ ಆಡಳಿತ ಮೇ 12ರಂದು ‘ದಿ ಒನ್ ಬಿಗ್ ಬ್ಯೂಟಿಫುಲ್ ಬಿಲ್’ ಎಂಬ ಮಸೂದೆಯನ್ನು ಅಲ್ಲಿನ ಸಂಸತ್ತಿನಲ್ಲಿ ಮಂಡಿಸಿತು. ಅಮೆರಿಕದ ನಾಗರಿಕರಲ್ಲದವರು ಆ ರಾಷ್ಟ್ರದಿಂದ ಹೊರಗೆ ಕಳಿಸುವ ಹಣಕ್ಕೆ ಶೇ. 5ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪವಿತ್ತು. ಈಗ ತೆರಿಗೆಯನ್ನು ಶೇ.3.5ರಷ್ಟು ಹೇರಲಾಗಿದೆ.
ಅಮೆರಿಕದಲ್ಲಿ ಸುಮಾರು 54 ಲಕ್ಷ ಭಾರತೀಯರಿ ದ್ದಾರೆ. ಅವರಲ್ಲಿ ಬಹುತೇಕರು ಎಚ್1ಬಿ, ಎಲ್-1, ತಾತ್ಕಾಲಿಕ ಕೆಲಸದ ವೀಸಾ ಮೇಲೆ ಇರುವ ಅಥವಾ ಗ್ರೀನ್ ಕಾರ್ಡ್ ಪಡೆದೂ ಇನ್ನೂ ನಾಗರಿಕತ್ವ ಪಡೆಯದ ಜನರು. ಭಾರತೀಯ ರಿಸರ್ವ್ ಬ್ಯಾಂಕಿನ ಮಾಹಿತಿ ಪ್ರಕಾರ, 2023-24ರಲ್ಲಿ ಭಾರತಕ್ಕೆ ಅವರು ಕಳಿಸಿದ ಮೊತ್ತ ಸುಮಾರು 32 ಶತಕೋಟಿ ಡಾಲರ್ (ಅಂದಾಜು 2.76 ಲಕ್ಷ ಕೋಟಿ ರೂ.). ಅಲ್ಲದೆ ಕಡಿಮೆ ಮೊತ್ತ ಕಳಿಸುವವರಿಗೂ ಯಾವುದೇ ರಿಯಾಯ್ತಿ ಅಥವಾ ವಿನಾಯ್ತಿ ಇಲ್ಲ. ಅಂದರೆ ತಂದೆ-ತಾಯಿಯ ದೈನಂದಿನ ಬದುಕಿಗಾಗಿ ಹಣ ಕಳಿಸುವ ಸಾಮಾನ್ಯರೂ ಶೇ. 3.5ರಷ್ಟು ತೆರಿಗೆಯನ್ನೇ ತೆರಬೇಕಾಗುತ್ತದೆ ಎನ್ನುತ್ತಾರೆ ವಿಶ್ಲೇಷಕರು.