ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಮತ್ತೊಮ್ಮೆ ಏರಲು ಡೊನಾಲ್ಡ್ ಟ್ರಂಪ್ ತುರುಸಿನ ಪ್ರಯತ್ನ ನಡೆಸುತ್ತಿದ್ದಾರೆ. ಅವರ ರಿಪಬ್ಲಿಕ್ ಪಕ್ಷದಿಂದಲೇ ಆರಕ್ಕೂ ಹೆಚ್ಚು ಮಂದಿ ಸ್ಪರ್ಧಿಸಲು ಕಾತರರಾಗಿದ್ದಾರೆ. ಹಾಗೇ ಡೆಮಾಕ್ರಟಿಕ್ ಪಕ್ಷದಿಂದಲೂ ಸುಮಾರು ಆರು ಜನ ಪ್ರಬಲ ಸ್ಪರ್ಧಿಗಳು ಇದ್ದಾರೆ.
ಡೆಮಾಕ್ರಟಿಕ್ ಪಕ್ಷದಿಂದ ಚುನಾವಣಾ ಕಣಕ್ಕೆ ಇಳಿದ ಪ್ರಬಲ ಅಭ್ಯರ್ಥಿಗಳಲ್ಲಿ ಮಾಜಿ ಮೇಯರ್ ಮೈಕಲ್ ಬ್ಲೂಮ್ಜ್ ಅವರೂ ಒಬ್ಬರು. ಆದರೆ ಅವರ ವಿಡಿಯೋವೊಂದನ್ನು ಡೊನಾಲ್ಡ್ ಟ್ರಂಪ್ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡು, ಇಷ್ಟೆಲ್ಲ ಗಲೀಜಾಗಿ ಇರಬೇಡಿ. ಅದು ನಿಮ್ಮ ಆರೋಗ್ಯಕ್ಕಾಗಲಿ, ಉಳಿದವರ ಆರೋಗ್ಯಕ್ಕಾಗಲೀ ಒಳ್ಳೆಯದಲ್ಲ ಎಂದು ಹೇಳಿದ್ದಾರೆ. ಅಷ್ಟಕ್ಕೂ ವಿಡಿಯೋದಲ್ಲಿ ಏನಿದೆ ಎಂದು ತಿಳಿಯಲು ಮುಂದೆ ಓದಿ...
ಮೈಕಲ್ ಬ್ಲೂಮ್ಜ್ ಅವರು ಫಿಜ್ಜಾ ತಿನ್ನುವ ವಿಡಿಯೋ ಇದು. ಚುನಾವಣೆ ಪ್ರಚಾರದ ಬಳಿಕ ಮೈಕಲ್ ಅವರು ಬಾಕ್ಸ್ನಲ್ಲಿದ್ದ ಫಿಜ್ಜಾದ ಮೇಲ್ಪದರದ ಒಂದು ತುಂಡನ್ನು ಅರ್ಧ ತಿಂದು, ಇನ್ನರ್ಧವನ್ನು ಅದೇ ಬಾಕ್ಸ್ನಲ್ಲಿ ಇಡುತ್ತಾರೆ. ಹಾಗೆ ಇಟ್ಟು ತಮ್ಮ ಕೈ ಬೆರಳುಗಳನ್ನು ನೆಕ್ಕಲು ಪ್ರಾರಂಭಿಸುತ್ತಾರೆ. ಹಾಗೆ ನೆಕ್ಕು ಎಂಜಲಾದ ಕೈಯಿಂದಲೇ ಪಕ್ಕದಲ್ಲಿದ್ದ ಕಾಫಿ ಪೆಟ್ಟಿಗೆಯನ್ನು ಮುಟ್ಟುತ್ತಾರೆ. ಆ ವಿಡಿಯೋವನ್ನು ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿಕೊಂಡಿದ್ದಾರೆ.
ನಿಮ್ಮ ಗಲೀಜಾದ ಬೆರಳುಗಳನ್ನು ಹಾಗೆ ನೆಕ್ಕ ಬೇಡಿ. ಇಂತಹ ಅಶುಚಿತ್ವ ನಿಮ್ಮ ಹಾಗೂ ಉಳಿದವರ ಆರೋಗ್ಯಕ್ಕೆ ಅಪಾಯಕಾರಿ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಟ್ರಂಪ್ ಶೇರ್ ಮಾಡಿಕೊಂಡ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದೆ. ಸುಮಾರು 3 ಮಿಲಿಯನ್ಗೂ ಅಧಿಕ ಜನರು ವೀಕ್ಷಿಸಿದ್ದಾರೆ. 35 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ.
ಜಗತ್ತಿನಾದ್ಯಂತ ಕೊರೊನಾ ಭೀತಿ ಆವರಿಸಿದೆ. ಎಲ್ಲ ದೇಶಗಳ ಸರ್ಕಾರಗಳೂ ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿವೆ. ಅಲ್ಲದೆ, ಸ್ವಚ್ಛವಾಗಿರಿ, ನಿಮ್ಮ ಕೈಗಳನ್ನು ಆಗಾಗ ತೊಳೆಯುತ್ತಿರಿ. ಸಾರ್ವಜನಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳಬೇಡಿ. ಮೂಗು, ಬಾಯಿಗಳನ್ನು ಮುಟ್ಟಿಕೊಂಡು ಇನ್ನೊಬ್ಬರು ಸ್ಪರ್ಶಿಸಬೇಡಿ. ನಿಮ್ಮನ್ನು ನೀವು ಸಂರಕ್ಷಿಸಿಕೊಳ್ಳಿ ಎಂದು ತಮ್ಮ ದೇಶಗಳ ಜನರಿಗೆ ಕರೆ ನೀಡುತ್ತಿವೆ. ಸನ್ನಿವೇಶ ಹೀಗಿರುವಾಗ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಯೋರ್ವ ನಿಷ್ಕಾಳಜಿ ವಹಿಸುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. (ಏಜೆನ್ಸೀಸ್)