ನ್ಯೂಸ್

X Fact-Checks | ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಮೂಲಕ ಭಾರತ ಲಾಭ ಗಳಿಸುತ್ತಿದೆ ಎಂದಿದ್ದ ನವರೋ ಹೇಳಿಕೆಯನ್ನು ಬೂಟಾಟಿಕೆ ಎಂದ ಎಕ್ಸ್​​​

X Fact-Checks: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಮೂಲಕ ಭಾರತ ಲಾಭ ಗಳಿಸುತ್ತಿದೆ ಎಂದು ಆರೋಪಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪರ್​​ ವ್ಯಾಪಾರ ಸಲಹೆಗಾರ ಪೀಟರ್ ನವರೊ, ಎಲೋನ್ ಮಸ್ಕ್ ಅವರ ಎಕ್ಸ್​​​ನಿಂದ ಸತ್ಯ ಪರಿಶೀಲನೆ ಎದುರಿಸಿದ್ದಾರೆ.

ನವರೊ ಅವರ ಹೇಳಿಕೆಗಳನ್ನು "ಬೂಟಾಟಿಕೆ" ಎಂದಿರುವ ಎಕ್ಸ್, ಭಾರತದ ಖರೀದಿಗಳು ಇಂಧನ ಸುರಕ್ಷತೆಯ ದೃಷ್ಠಿಯಿಂದ ಕೈಗೊಳ್ಳಲಾಗಿದ್ದು, ಅವೆಲ್ಲಾ ಕಾನೂನುಬದ್ಧವಾಗಿವೆ, ಇದರಲ್ಲಿ ಯಾವುದೇ ರೀತಿಯ ನಿರ್ಬಂಧಗಳ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಇತ್ತೀಚೆಗೆ ಪೀಟರ್ ನವರೋ, ಭಾರತದ ವ್ಯಾಪಾರ ಮತ್ತು ವಿದೇಶಾಂಗ ನೀತಿಗಳನ್ನು ಪದೇ ಪದೇ ಟೀಕಿಸಿದ್ದು, ಅದರಲ್ಲೂ ವಿಶೇಷವಾಗಿ ರಷ್ಯಾದ ತೈಲದ ನಿರಂತರ ಆಮದನ್ನು ಗುರಿಯಾಗಿಸಿಕೊಂಡಿದ್ದಾರೆ. ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ಭಾರತವು ಸಂಪೂರ್ಣವಾಗಿ ಲಾಭಕ್ಕಾಗಿ ರಷ್ಯಾದ ತೈಲವನ್ನು ಖರೀದಿಸುತ್ತಿದೆ ಎಂದು ಅವರು ಆರೋಪಿಸಿದರು. ಇದರಿಂದ ಬರುವ ಆದಾಯವು ನೇರವಾಗಿ ರಷ್ಯಾದ ಯುದ್ಧ ಯಂತ್ರವನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.

ಈ ವಿಷಯವನ್ನು ಸತ್ಯ ಪರಿಶೀಲನೆ ನಡೆಸಿರುವ ಎಕ್ಸ್‌, ಭಾರತ ಇಂಧನ ಭದ್ರತೆಗಾಗಿ ಕಾನೂನುಬದ್ಧವಾಗಿ ರಷ್ಯಾದ ತೈಲ ಖರೀದಿ ಮಾಡುತ್ತಿದ್ದು, ಇದು ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನವರೊ, ಜನರ ಪೋಸ್ಟ್‌ಗಳಲ್ಲಿ ಪ್ರಚಾರಕ್ಕೆ ಅವಕಾಶ ನೀಡಿದ್ದಕ್ಕಾಗಿ ಮತ್ತು ಸತ್ಯ-ಪರಿಶೀಲನೆಯನ್ನು ತಪ್ಪು ಟಿಪ್ಪಣಿ ಎಂದು ಕರೆದಿದ್ದಕ್ಕಾಗಿ ಎಲೋನ್ ಮಸ್ಕ್ ಅವರನ್ನು ಟೀಕಿಸಿದರು. ಭಾರತವು ಲಾಭ ಗಳಿಸಲು ಮಾತ್ರ ರಷ್ಯಾದ ತೈಲವನ್ನು ಖರೀದಿಸುತ್ತದೆ ಎಂದು ಪುನರುಚ್ಛರಿಸಿದ ನವರೋ, ಉಕ್ರೇನಿಯನ್ನರನ್ನು ಕೊಲ್ಲುವುದನ್ನು ನಿಲ್ಲಿಸಿ. ಅಮೆರಿಕನ್ನರ ಉದ್ಯೋಗಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ ಎಂದು ನವರೊ ತಮ್ಮ ಎಕ್ಸ್​​ ಖಾತೆಯಲ್ಲಿ ಬರೆದಿದ್ದಾರೆ.

ನವಾರೋ ಹಿಂದಿನ ಟೀಕೆ

ರಷ್ಯಾದ ತೈಲ ಆಮದುಗಳನ್ನು ಮುಂದುವರಿಸುವುದಕ್ಕಾಗಿ ಡೊನಾಲ್ಡ್​​ ಟ್ರಂಪ್​​, ಭಾರತದ ರಫ್ತಿನ ಮೇಲೆ ಶೇ 50 ಹೆಚ್ಚಿನ ಸುಂಕಗಳನ್ನು ವಿಧಿಸಿದ ನಂತರ ಮಾತನಾಡಿದ್ದ ನವರೊ, ಇದು ಬ್ರೆಜಿಲ್ ಹೊರತುಪಡಿಸಿ ಅನ್ವಯಿಸಲಾದ ಅಂತಹ ಅತ್ಯಧಿಕ ಸುಂಕವಾಗಿದೆ ಎಂದಿದ್ದು, ರಷ್ಯಾ-ಉಕ್ರೇನ್ ಸಂಘರ್ಷವನ್ನು ಮೋದಿಯ ಯುದ್ಧ ಎಂದು ಕರೆಯುವ ಮೂಲಕ ಭಾರತದ ಖರೀದಿಗಳು ಮಾಸ್ಕೋದ ಮಿಲಿಟರಿ ಆಕ್ರಮಣಕ್ಕೆ ಉತ್ತೇಜನ ನೀಡುತ್ತಿವೆ ಎಂದು ಆರೋಪಿಸಿದ್ದರು.(ಏಜೆನ್ಸೀಸ್​​)