ನ್ಯೂಸ್

ಟ್ರಕ್ ಟರ್ಮಿನಲ್ ಹಗರಣ; ಡಿ.ಎಸ್. ವೀರಯ್ಯಗೆ ಜಾಮೀನು

ಬೆಂಗಳೂರು: ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ (ಡಿಡಿಯುಟಿಟಿಎಲ್) ಹಗರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್. ವೀರಯ್ಯ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

2021ರಿಂದ 2023ರ ಅವಧಿಯಲ್ಲಿ ಡಿಡಿಯುಟಿಟಿಎಲ್ ನಿಗಮದಲ್ಲಿ ಗುತ್ತಿಗೆ ನೀಡಿಕೆಯಲ್ಲಿ ಅಕ್ರಮ ನಡೆದಿದೆ ಎಂದು ವಿಲ್ಸನ್ ಗಾರ್ಡನ್ ಠಾಣೆಗೆ 2023 ಸೆ.23ರಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ದೂರು ನೀಡಿದ್ದರು. ಇದರ ಮೇರೆಗೆ ದಾಖಲಾದ ಪ್ರಕರಣದ ತನಿಖೆ ಕೈಗೊಂಡ ಸಿಐಡಿ ಅಧಿಕಾರಿಗಳು ಅಂದಿನ ನಿಗಮದ ಅಧ್ಯಕ್ಷರಾಗಿದ್ದ ಡಿ.ಎಸ್. ವೀರಯ್ಯನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಡಿ.ಎಸ್.ವೀರಯ್ಯ ಪರ ವಕೀಲರು ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಕೆ.ಎನ್. ಶಿವಕುಮಾರ್, ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.