ನ್ಯೂಸ್

ಕೊಬ್ಬಿನಾಂಶದ ನೆಪವೊಡ್ಡಿ ಹೈನುಗಾರರಿಗೆ ತೊಂದರೆ

ಹೊಮ್ಮರಗಳ್ಳಿ ಬಿಎಂಸಿ ಕೇಂದ್ರದ ಮುಂದೆ ಹಾಲು ಉತ್ಪಾದಕರ ಆಕ್ರೋಶ

ಹಂಪಾಪುರ : ಎಚ್.ಡಿ.ಕೋಟೆ ತಾಲೂಕಿನ ಹಂಪಾಪುರ ಹೋಬಳಿಯ ಹೊಮ್ಮರಗಳ್ಳಿಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಗುಣಮಟ್ಟದ ಹಾಲು ಪೂರೈಸುತ್ತಿದ್ದರೂ ಕೊಬ್ಬಿನಾಂಶ ಕಡಿಮೆ ನೆಪ ಹೇಳಿ ಹೈನುಗಾರರಿಗೆ ತೊಂದರೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಕಳೆದ ಒಂದು ತಿಂಗಳಿಂದ ಹಾಲಿನ ಗುಣಮಟ್ಟ, ಹಾಲಿನ ಕೊಬ್ಬಿನಾಂಶ ಬರುತ್ತಿಲ್ಲ ಎಂದು ಹೇಳಿ ಪರೀಕ್ಷೆ ಮಾಡಲಾಗುತ್ತಿದೆ. ಇದರಿಂದ ರೈತರು ಡೇರಿ ಮುಂದೆ ಗಂಟೆಗಟ್ಟಲೇ ಸಾಲುಗಟ್ಟಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ದಿನನಿತ್ಯ ಮಾಡುವ ಕೆಲಸಗಳಿಗೆ, ಜಮೀನು ಕೆಲಸಗಳಿಗೆ ತೊಂದರೆಯಾಗುತ್ತಿದೆ.

ನಾವು ನಿತ್ಯ ಹಾಲನ್ನು ಕರೆದು ನೇರವಾಗಿ ಡೇರಿಗೆ ತೆಗೆದುಕೊಂಡು ಹೋಗುತ್ತೇವೆ. ಯಾವುದೇ ಕಲಬೆರಕೆ ಮಾಡದೆ ಗುಣಮಟ್ಟದ ಹಾಲನ್ನೆ ಪೂರೈಸುತ್ತಿದ್ದೇವೆ. ಆದರೂ ಡೇರಿಯವರು ನೀರು ಮಿಶ್ರಣ ಮಾಡಿ ನೀಡುತ್ತಿರುವುದಾಗಿ ಆರೋಪ ಮಾಡುವ ಮೂಲಕ ಹೈನುಗಾರರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಗುರುವಾರ ಗ್ರಾಮಸ್ಥರು ಡೇರಿ ಎದುರು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ ಗುಣಮಟ್ಟ ಕಡಿಮೆ ಹಾಗೂ ಕೊಬ್ಬಿನಾಂಶ ಕಡಿಮೆ ನೆಪವೊಡ್ಡಿ ಹಾಲಿನ ದರ ಕಡಿಮೆ ಮಾಡುವ ಮೂಲಕ ಅನ್ಯಾಯವೆಸಗುತ್ತಿದ್ದಾರೆ. 20-30 ವರ್ಷಗಳಿಂದ ಗುಣಮಟ್ಟದ ಹಾಲನ್ನೆ ಹಾಕುತ್ತಿದ್ದರೂ ಬಿಎಂಸಿ ಕೇಂದ್ರದವರು ಒಂದು ತಿಂಗಳಿಂದ ತೊಂದರೆ ಕೊಡುತ್ತಿದ್ದಾರೆ ಎಂದು ಸ್ಥಳೀಯ ರೈತರು ದೂರಿದ್ದಾರೆ.

ಗುಣಮಟ್ಟವಿರುವ ಹಾಲು ಮತ್ತು ಗುಣಮಟ್ಟವಿಲ್ಲದೆ ಇರುವ ಹಾಲು ಎರಡನ್ನು ರೈತರಿಂದ ಶೇಖರಣೆ ಮಾಡಿ ತೆಗೆದುಕೊಂಡು ಹೋಗುತ್ತಾರೆ. ಇವರು ಈ ಹಾಲನ್ನು 48 ರಿಂದ 54 ರೂ.ಗೆ ಮಾರಾಟ ಮಾಡುತ್ತಾರೆ. ಆದರೆ ರೈತರಿಗೆ 25 ರಿಂದ 31 ರೂ. ನೀಡುತ್ತಾರೆ. ಇದರಿಂದ ನಮಗೆ ಅನ್ಯಾಯವಾಗುತ್ತಿದೆ ಎಂದು ಹಾಲು ಉತ್ಪಾದಕರಾದ ಸಂತೋಷ್, ಮಲ್ಲಿಕಾರ್ಜುನ, ಅಭಿ ವಿಜಯವಾಣಿ ಜತೆ ಅಳಲು ತೋಡಿಕೊಂಡರು.