ನ್ಯೂಸ್

ಮಧ್ಯಪ್ರದೇಶ ಕಾಂಗ್ರೆಸ್​ ಸರ್ಕಾರಕ್ಕೆ ಮತ್ತಷ್ಟು ಕಂಟಕ: ನಾಪತ್ತೆಯಾಗಿರುವ ನಾಲ್ವರು ಶಾಸಕರಲ್ಲಿ ಒಬ್ಬರಿಂದ ರಾಜೀನಾಮೆ

ಭೋಪಾಲ್​: ಮಧ್ಯಪ್ರದೇಶದ ಕಾಂಗ್ರೆಸ್​ ಸರ್ಕಾರಕ್ಕೆ ಮತ್ತಷ್ಟು ಗಂಡಾಂತರ ಎದುರಾಗಿದ್ದು, ನಾಪತ್ತೆಯಾಗಿರುವ ನಾಲ್ವರು ಕಾಂಗ್ರೆಸ್​ ಶಾಸಕರಲ್ಲಿ ಓರ್ವ ಶಾಸಕ ವಿಧಾನಸಭಾ ಸ್ಪೀಕರ್​ ಎನ್​.ಆರ್​. ಪ್ರಜಾಪತಿ ಅವರಿಗೆ ಶುಕ್ರವಾರ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ.

ಎರಡನೇ ಬಾರಿಯು ಪಕ್ಷಕ್ಕೆ ಬಹುಮತ ದೊರೆಯಲಿಲ್ಲ. ಅಲ್ಲದೆ, ನನ್ನನ್ನು ನಿರಂತರವಾಗಿ ನಿರ್ಲಕ್ಷಿಸಿಕೊಂಡು ಬರಲಾಗುತ್ತಿದೆ ಎಂದು ಶಾಸಕ ಹರ್ದೀಪ್ ಸಿಂಗ್​​ ದಂಗ್​​ ರಾಜೀನಾಮೆ ಪತ್ರದಲ್ಲಿ ಆರೋಪಿಸಿದ್ದಾರೆ. ಅಲ್ಲದೆ, ಭ್ರಷ್ಟ ಸರ್ಕಾರದ ಭಾಗವಾಗಿ ಕಾರ್ಯ ನಿರ್ವಹಿಸಲು ಯಾವೊಬ್ಬ ಸಚಿವರು ಸಿದ್ಧರಿಲ್ಲ ಎಂದು ಹೇಳಿದ್ದಾರೆ.

ಸಿಎಂ ಕಮಲ್​ನಾಥ್​ ಅವರ ಸರ್ಕಾರವನ್ನು ಕೆಳಗೆ ಬೀಳಿಸುವ ಬಿಜೆಪಿ ಪ್ರಯತ್ನವಾಗಿ ಮಂಗಳವಾರ ಗುರುಗ್ರಾಮದ ಹೋಟೆಲ್​ಗೆ ತೆರಳಿದ 10 ಶಾಸಕರಲ್ಲಿ ಹರ್ದೀಪ್​ ಕೂಡ ಒಬ್ಬರೆನ್ನಲಾಗಿದೆ. ಈಗಾಗಲೇ 6 ಶಾಸಕರನ್ನು ವಾಪಸ್​ ಕರೆತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಕಾಂಗ್ರೆಸ್​ ಹೇಳಿದೆ.

ಆದರೆ, ಹರ್ದೀಪ್​ ಸಿಂಗ್​ ದಂಗ್​, ರಘುರಾಜ್​ ಕಾನ್ಸಾನ, ಬೈಸುಹುಲಾಲ್​ ಸಿಂಗ್​ ಮತ್ತು ಪಕ್ಷೇತರ ಶಾಸಕ ಶೇರಾ ಭೈಯಾ ನಾಪತ್ತೆಯಾಗೇ ಉಳಿದಿದ್ದಾರೆ. ಬಿಜೆಪಿ ಆಡಳಿತವಿರುವ ಕರ್ನಾಟಕದಲ್ಲಿ ನಾಲ್ವರು ಶಾಸಕರನ್ನು ಇರಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಇನ್ನು ರಾಜೀನಾಮೆ ಕುರಿತು ಮಾತನಾಡಿರುವ ಸಿಎಂ ಕಮಲ್​ನಾಥ್​, ಈ ಬಗ್ಗೆ ನನಗೆ ಮಾಹಿತಿ ಇದೆ. ಶಾಸಕರಿಂದ ಈವರೆಗೂ ಯಾವುದೇ ಪತ್ರವನ್ನು ನಾನು ಸ್ವೀಕರಿಸಿಲ್ಲ ಹಾಗೂ ಚರ್ಚೆಯೂ ನಡೆಸಿಲ್ಲ. ಅವರನ್ನು ಭೇಟಿ ನೀಡಿ ಮಾತನಾಡುವವರೆಗೂ ನಾನು ಈ ಬಗ್ಗೆ ಹೇಳಿಕೆ ಕೊಡುವುದು ಸೂಕ್ತ ಎನಿಸುವುದಿಲ್ಲ ಎಂದು ಹೇಳಿದ್ದಾರೆ.

ಮಧ್ಯಪ್ರದೇಶಲ್ಲಿ ಒಟ್ಟು 230 ವಿಧಾನಸಭಾ ಸ್ಥಾನಗಳಿದ್ದು, ಇಬ್ಬರು ಶಾಸಕ ಮರಣದಿಂದ 228ಕ್ಕೆ ಇಳಿದಿದೆ. ಅದರಲ್ಲಿ ಮ್ಯಾಜಿಕ್​ ನಂಬರ್​ಗೆ 215 ಸ್ಥಾನಗಳು ಬೇಕಾಗಿದ್ದು, ಸದ್ಯ ಕಾಂಗ್ರೆಸ್​ 114, ಬಿಜೆಪಿ 107 ಚುನಾಯಿತ ಪ್ರತಿನಿಧಿಗಳನ್ನು ಹೊಂದಿದೆ. ಉಳಿದಂತೆ ಬಿಎಸ್​ಪಿ 2, ಎಸ್​ಪಿ 1 ಹಾಗೂ ಪಕ್ಷೇತರರು ನಾಲ್ವರು ಶಾಸಕರಿದ್ದು ಕಾಂಗ್ರೆಸ್​ಗೆ ಬೆಂಬಲ ನೀಡಿವೆ. ಅದರಲ್ಲಿ ಪಕ್ಷೇತರರು ಹಾಗೂ ತಮ್ಮದೇ ಪಕ್ಷದ ಶಾಸಕರು ಕಾಣೆಯಾಗಿದ್ದು, ರಾಜೀನಾಮೆ ಪತ್ರ ರವಾನಿಸಿರುವುದರಿಂದ ಕಮಲ್​ನಾಥ್​ ಸರ್ಕಾರಕ್ಕೆ ಕಂಟಕ ಎದುರಾಗಿದೆ. (ಏಜೆನ್ಸೀಸ್​)