- ಕಪ್ಪು ಕೋಟ್ ಧರಿಸಿ ವಾದಕ್ಕಿಳಿದ ತಮಿಳು ನಟಿ
- ಲಾಯರ್ ಪ್ರೀತಿ ಪಾತ್ರದಲ್ಲಿ ತಮಿಳು ನಟಿ
- ಸೂರ್ಯ ಅಭಿನಯದ ಕರುಪ್ಪು ಮೇ 14ಕ್ಕೆ ರಿಲೀಸ್
ಬಹುಭಾಷಾ ತಾರೆ ತ್ರಿಷಾ ಕೃಷ್ಣನ್ ಲಾಯರ್ ಆಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇತ್ತೀಚೆಗೆ ತಮ್ಮ ವಿರುದ್ಧ ಕೇಳಿಬಂದ ರೂಮರ್, ಗಾಸಿಪ್ ಹರಡಿದವರ ವಿರುದ್ಧ ಸ್ವತಃ ತಾವೇ ಕೋರ್ಟ್‌ನಲ್ಲಿ ಮೆಟ್ಟಿಲೇರಿ ಪಾಟೀ ಸವಾಲಿಗಿಳಿದರಾ? ಅಂದುಕೊಂಡರೆ ತಪ್ಪಾದೀತು. ಬದಲಾಗಿ ಅವರು ‘ಕರುಪ್ಪು’ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೂರ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ತೆರೆಗೆ ಬರಲು ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ತ್ರಿಷಾ ಪಾತ್ರವನ್ನು ಪರಿಚಯಿಸಿ, ಕ್ಯಾರೆಕ್ಟರ್ ಟೀಸರ್ ರಿಲೀಸ್ ಮಾಡಲಾಗಿದೆ. ಇಲ್ಲಿ ಅವರು ಪ್ರೀತಿ ಎಂಬ ಲಾಯರ್ ಪಾತ್ರದಲ್ಲಿದ್ದಾರೆ. 38 ಸೆಕೆಂಡ್‌ನ ಪಾತ್ರ ಪರಿಚಯಿಸುವ ಟೀಸರ್‌ನಲ್ಲಿ ತ್ರಿಷಾ ಎರಡು-ಮೂರು ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾದರೆ, ‘ಕರುಪ್ಪು’ ಚಿತ್ರದಲ್ಲಿ ತ್ರಿಷಾ ಕೋರ್ಟ್ ಮೆಟ್ಟಿಲೇರಿದ್ದು ಯಾಕೆ ಎಂಬುದನ್ನು ತಿಳಿಯಬೇಕಾದರೆ, ಮೇ 14ರವರೆಗೆ ಕಾಯಬೇಕಷ್ಟೇ. ಈ ಚಿತ್ರದ ಮೂಲಕ ನಟ ಸೂರ್ಯ ಮತ್ತು ತ್ರಿಷಾ ಕೃಷ್ಣನ್ 20 ವರ್ಷಗಳ ಬಳಿಕ ಮತ್ತೆ ಒಂದಾಗಿ ನಟಿಸುತ್ತಿದ್ದಾರೆ. ಈ ಹಿಂದೆ ‘ಮೌನಂ ಪೆಸಿಯಾದೆ’ (2002), ‘ಆಯುತು ಎಳುತು’ (2004) ಹಾಗೂ ‘ಆರು’ (2005) ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ‘ಕರುಪ್ಪು’ ಆ್ಯಕ್ಷನ್ ಡ್ರಾಮಾ ಜಾನರ್ ಚಿತ್ರವಾಗಿದ್ದು, ಆರ್‌ಜೆ ಬಾಲಾಜಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಜತೆಜತೆಗೆ ತ್ರಿಷಾ ತೆಲುಗಿನ ‘ವಿಶ್ವಂಭರ’, ಮಲಯಾಳಂನ ‘ರಾಮ್’ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. -ಏಜೆನ್ಸೀಸ್