ಬೆಂಗಳೂರು: ಕೆ.ಆರ್.ಪುರದ ಸೀಗೆಹಳ್ಳಿಯಲ್ಲಿ ಇತ್ತೀಚೆಗೆ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣ ಇಡೀ ಬೆಂಗಳೂರೇ ಬೆಚ್ಚಿ ಬೀಳಿಸಿತ್ತು. ಇದರ ತನಿಖೆ ಪೂರ್ಣಗೊಳಿಸಿರುವ ಪೊಲೀಸರು, ಇಬ್ಬರು ಆರೋಪಿಗಳ ವಿರುದ್ಧ ನಗರದ 29ನೇ ಎಸಿಎಂಎಂ ಕೋರ್ಟ್‌ಗೆ 110 ಮಂದಿ ಸಾಕ್ಷಿಗಳ ಹೇಳಿಕೆ ಸೇರಿ 2,085 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ.
ಪ್ರಕರಣದ ಮೊದಲ ಆರೋಪಿ ಕೆನತ್ ಮತ್ತು 2ನೇ ಆರೋಪಿ ಶ್ವೇತಾ ವಿರುದ್ಧ ಆರೋಪಪಟ್ಟಿ ಸಲ್ಲಿಸಿ, ಆರೋಪಿಗಳ ನಡುವಿನ ಸಂಬಂಧ ಹಾಗೂ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ ಮಗಳ ಬಗ್ಗೆ ತಂದೆ-ತಾಯಿ ಪ್ರಶ್ನಿಸಿದಕ್ಕೆ ಚಾಕುವಿನಿಂದ ಚುಚ್ಚಿ ಬರ್ಬರ ಹತ್ಯೆ ಮಾಡಲು ಕಾರಣವಾಗಿತ್ತು. ಇಬ್ಬರು ಆರೋಪಿಗಳು ಸೇರಿಯೇ ಹತ್ಯೆಗೆ ಸಂಚು ರೂಪಿಸಿದ್ದರು. ಮನೆಗೆ ಬಂದವರನ್ನು ಕೆನತ್ ಮೂವರಿಗೆ ಒಂದೇ ಚಾಕುವಿನಿಂದ ಇರಿದು, ಕೇವಲ 3 ನಿಮಿಷದಲ್ಲಿ ಕೊಲೆ ಮಾಡಿದ್ದಾನೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಜೂನ್ 22ರಂದು ಕೆ.ಆರ್. ಪುರಂನ ಸೀಗೆಹಳ್ಳಿಯ ಧಮಾನಿಕ್ ಲೇಔಟ್‌ನಲ್ಲಿರುವ ಸಾಯಿ ಗ್ರೀನ್ ಅಪಾರ್ಟ್ ಮೆಂಟ್‌ನಲ್ಲಿ ಸೋಮಸುಂದರ್ (55) ಅವರ ಪತ್ನಿ ಮುತ್ತುಲಕ್ಷ್ಮೀ (48) ಮತ್ತು ಅವರ ಕಿರಿಯ ಮಗಳು ಸುಪ್ರಿಯಾ (20) ಅವರನ್ನು ಹತ್ಯೆ ಮಾಡಲಾಗಿತ್ತು.
ಕೌಟುಂಬಿಕ ವಿಚಾರವಾಗಿ ಶ್ವೇತಾ ತನ್ನ ಸ್ನೇಹಿತ ಕೆನತ್ ಜತೆ ಸಾಯಿ ಗ್ರಿನ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಆದರೆ, ತಂದೆ-ತಾಯಿ ಹೆಸರಿನಲ್ಲಿ ಸುಮಾರು 60 ಲಕ್ಷ ರೂ. ವೈಯಕ್ತಿಕ ಸಾಲ ಪಡೆದು, ಅದನ್ನು ಕೆನತ್‌ಗೆ ನೀಡಿದ್ದಳು. ಆತ ಕೋಚಿಂಗ್ ಸೆಂಟರ್ ಹಾಗೂ ಕ್ವಾಡ್ ಕಿಚನ್ ಸೆಂಟರ್ ತೆರೆಯುವುದಾಗಿ ಹಣ ವೈಯಕ್ತಿಕವಾಗಿ ಬಳಕೆ ಮಾಡಿಕೊಂಡು, ಬೇರೊಬ್ಬ ಗೆಳತಿಯ ಜತೆ ಮೋಜು-ಮಸ್ತಿಗಾಗಿ ಖರ್ಚು ಮಾಡಿದ್ದನು. ಆ ಸಾಲದ ಕಂತು ಪ್ರತಿ ತಿಂಗಳ ಪೋಷಕರಿಗೆ ಹೊರೆಯಾಗಿತ್ತು, ಅದನ್ನು ಪ್ರಶ್ನಿಸಿದ್ದಾರೆ.
ಇದೇ ದ್ವೇಷನ್ನು ಇಟ್ಟುಕೊಂಡು ಕೆನತ್ ಜತೆ ವಾಸವಾಗಿದ್ದ ಶ್ವೇತಾ ಜೂನ್ 22ರಂದು ತಂದೆ-ತಾಯಿ ಆರೋಪಿಗಳಿರುವ ಅಪಾರ್ಟ್‌ಮೆಂಟ್‌ಗೆ ಹೋಗಿದ್ದಾರೆ. ಈ ವೇಳೆ ಆರೋಪಿ ಕೆನತ್ ಮೊದಲಿಗೆ ಸೋಮಸುಂದರ್‌ಗೆ ಚಾಕುವಿನಿಂದ ಇರಿದಿದ್ದಾನೆ. ನಂತರ ಮುತ್ತುಲಕ್ಷ್ಮೀ ಮತ್ತು ಸುಪ್ರಿಯಾಗೆ ಕೆನತ್ ಚಾಕುವಿನಿಂದ ಇರಿದು ಹತ್ಯೆಗೈದು ಇಬ್ಬರು ಪುದುಚೇರಿಗೆ ಪರಾರಿಯಾಗಿದ್ದರು.