ಹನೂರಿನಲ್ಲಿ ಎನ್.ತಿಪ್ಪಣ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮುರುಡೇಶ್ವರಸ್ವಾಮಿ, ಬಸವರಾಜಪ್ಪ, ಮೋಹನ್, ವಿನೋದ್‌ಕುಮಾರ್ ಇತರರು ಇದ್ದರು. 
ನ್ಯೂಸ್

ಎನ್.ತಿಪ್ಪಣ್ಣಗೆ ವೀರಶೈವ ಮಹಾಸಭಾದಿಂದ ಶ್ರದ್ಧಾಂಜಲಿ

ಹನೂರು: ನಿಧನರಾದ ಹಿರಿಯ ನ್ಯಾಯವಾದಿ, ಅಖಿಲ ಭಾರತ ವೀರಶೈವ ಮಹಾಸಭಾ ಮಾಜಿ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ ಅವರಿಗೆ ಶುಕ್ರವಾರ ಹನೂರಿನಲ್ಲಿ ಲಿಂಗಾಯತ ವೀರಶೈವ ಮಹಾಸಭಾದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ತಿಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಈ ವೇಳೆ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಮುರುಡೇಶ್ವರಸ್ವಾಮಿ ಮಾತನಾಡಿ, ವಿಧಾನ ಪರಿಷತ್ ಮಾಜಿ ಸಭಾಪತಿಯಾಗಿದ್ದ ತಿಪ್ಪಣ್ಣ ಅವರು ಹಲವು ವರ್ಷಗಳ ಕಾಲ ವಕೀಲರಾಗಿ ಕಾರ್ಯನಿರ್ವಹಿಸಿದ್ದು, ತುಂಬ ಅನುಭವವನ್ನು ಹೊಂದಿದ್ದರು. ಬಳಿಕ ರಾಜಕೀಯವನ್ನು ಪ್ರವೇಶಿಸಿ 4 ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದು, ಸಭಾಪತಿಯಾಗಿಯೂ ಸೇವೆ ಸಲ್ಲಿಸಿದ್ದರು. 2012ರಲ್ಲಿ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದರು. ಇವರ ನಿಧನ ಎಲ್ಲರಿಗೂ ನೋವನ್ನು ಉಂಟು ಮಾಡಿದೆ ಎಂದು ತಿಳಿಸಿದರು. ಮಹಾಸಭಾದ ಜಿಲ್ಲಾ ನಿರ್ದೇಶಕ ಕಣ್ಣೂರು ಬಸವರಾಜಪ್ಪ, ತಾಲೂಕು ನಿರ್ದೇಶಕರಾದ ವಿನೋದ್‌ಕುಮಾರ್, ಜಗದೀಶ್, ಶಾಂತಮೂರ್ತಿ, ಮುಖಂಡರಾದ ಸುಬ್ಬಣ್ಣ, ಮೋಹನ್, ವೀರಭದ್ರಸ್ವಾಮಿ, ಕುಮಾರ್ ಹಾಗೂ ಇನ್ನಿತರರು ಇದ್ದರು.