ರಾಣೆಬೆನ್ನೂರ: ಆಧುನಿಕ ಜೀವನ ಶೈಲಿಯ ಬದಲಾವಣೆ ಗಾಳಿಯಿಂದ ನಮ್ಮ ಗ್ರಾಮೀಣ ಜಾನಪದ ಸೊಗಡು ಸೊರಗುತ್ತಿದೆ ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ತಾಲೂಕಿನ ಯಕ್ಲಾಸಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಏರ್ಪಡಿಸಿದ್ದ ಗಿರಿಜನ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಭಾಗದ ಯುವ ಸಮೂಹದ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಗೀಗೀಪದ, ಹಂತಿಹಾಡು ಸೇರಿ ಅನೇಕ ಜಾನಪದ ಕಲೆಗಳು ಪೀಳಿಗೆಯಿಂದ ಪೀಳಿಗೆಗೆ ಕಲೆ ಕರಗತವಾಗಿ ಹರಿದು ಬರುತ್ತಿದ್ದವು. ನಮ್ಮ ಪೂರ್ವಜ್ಜರಿಂದ ಬಂದ ಜಾನಪದ ಕಲೆಗಳನ್ನು ಮುಂದಿನ ಪೀಳಿಗೆ ಪರಿಚಯಿಸುವ ಕೆಲಸವನ್ನು ಇಂದಿನ ಯುವ ಜನಾಂಗ ಮಾಡಬೇಕು ಎಂದರು.
ರಾಹುತನಕಟ್ಟಿ ಗ್ರಾಪಂ ಅಧ್ಯಕ್ಷೆ ಅಶ್ವಿನಿ ಬಣಕಾರ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ, ಗ್ರಾಪಂ ಉಪಾಧ್ಯಕ್ಷ ಹೊನ್ನಪ್ಪ ಗೌಡ್ರ, ಸದಸ್ಯ ಉಮೇಶ ನಲವಾಗಲ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ, ವಾಲ್ಮೀಕಿ ಮಹಾಸಭಾದ ತಾಲೂಕು ಅಧ್ಯಕ್ಷ ಚಂದ್ರಪ್ಪ ಬೇಡರ, ತಾ.ಪಂ. ಮಾಜಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ, ಗ್ರಾಮದ ಮಂಜುನಾಥ ಓಲೇಕಾರ, ಹಾಲೇಶ ಜಾನಗಿರಿ, ಕುಮಾರ ವೀರಾಪುರ, ಶಿವಾಜಿ ಬನ್ನಿಕೋಡ ಮತ್ತಿತರರು ಉಪಸ್ಥಿತರಿದ್ದರು.