ನ್ಯೂಸ್

ಫಾಸ್ಟ್ ಟ್ರ್ಯಾಕ್ ಕೋರ್ಟ್‌ನಲ್ಲಿ ವಿಚಾರಣೆ?

ಮಂಜುನಾಥ.ಕೆ

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ತ್ವರಿತಗತಿ ವಿಚಾರಣೆ ನಡೆಸಿ ಶಿಕ್ಷೆ ಕೊಡಿಸಲು ಮುಂದಾಗಿದ್ದು ಈ ಸಂಬಂಧ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಫಾಸ್ಟ್ ಟ್ರ್ಯಾಕ್ ಅಥವಾ ವಿಶೇಷ ನ್ಯಾಯಾಲಯಕ್ಕೆ ಒಪ್ಪಿಸುವ ಕುರಿತಂತೆ ಚರ್ಚೆ ನಡೆಸುತ್ತಿದ್ದಾರೆ.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು, ಆರೋಪಿಗಳಿಗೆ ಶಿಕ್ಷೆ ಕೊಡಿಸುವ ವಿಚಾರ ಸಂಬಂಧ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಕಾನೂನು ತಜ್ಞರೊಂದಿಗೆ ಚರ್ಚಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್
ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಬಹುತೇಕ ವರದಿಗಳು ಚಾರ್ಜ್‌ಶೀಟ್ ನಲ್ಲಿ ನಮೂದಿಸಲಾಗಿದೆ. ಹೈದಾರಾದ್‌ನಿಂದ ಸಿಎಫ್‌ಎಸ್‌ಎಲ್‌ನಿಂದ ಕೆಲವು ವರದಿಗಳು ಇನ್ನಷ್ಟೇ ಬರಬೇಕಿದ್ದು, ಅವುಗಳು ಬಂದ ಬಳಿಕ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ಹಾಗೆಯೇ ಆರೋಪಿಗಳಿಗೆ ಶಿಕ್ಷೆ ಕೊಡಿಸುವ ಸಂಬಂಧ ತ್ವರಿತ ನ್ಯಾಯಾಲಯ ಸ್ಥಾಪನೆಗೂ ಕ್ರಮಕೈಗೊಳ್ಳಲಾಗುತ್ತದೆ ಎಂದರು.
ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ರಾಜಾತಿಥ್ಯ ವಿಚಾರ ಸಂಬಂಧಿಸಿದಂತೆ ಇಬ್ಬರು ಐಪಿಎಸ್ ಅಧಿಕಾರಿಗಳು ಸಮಗ್ರವಾಗಿ ತನಿಖೆ ನಡೆಸುತ್ತಿದ್ದು, ಸದ್ಯದಲ್ಲೇ ವರದಿ ನೀಡಲಿದ್ದಾರೆ ಎಂದರು.
ಜೈಲಿನಲ್ಲಿ ರಾಜಾತಿಥ್ಯ ನೀಡಲಾಗಿರುವ ಬಗ್ಗೆ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತಿಮಾ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಅದೇ ರೀತಿ ಸಿಸಿಬಿ ಜಂಟಿ ಪೊಲೀಸ್ ಡಾ.ಚಂದ್ರಗುಪ್ತ ನೇತೃತ್ವದ ತಂಡ ಅಧಿಕಾರಿಗಳ ಪಾತ್ರ ಬಗ್ಗೆ ಮತ್ತು ಜೈಲಿನಲ್ಲಿರುವ ಲೋಪದೋಷಗಳು ಕುರಿತಂತೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಸರ್ಕಾರ ನಿರ್ದೇಶಿಸಿದೆ. ತನಿಖೆ ಮುಕ್ತಾಯ ಬಳಿಕ ಈ ಎರಡು ವರದಿಯನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.