ನ್ಯೂಸ್

ವಿಚಾರಣಾ ನ್ಯಾಯಾಲಯದ ಆದೇಶ ಪುರಸ್ಕೃತ : ಚಾರ್ಜ್‌ಶೀಟ್ ರದ್ದತಿಗೆ ಹೈ ನಕಾರ

ಬೆಂಗಳೂರು: ವಯೋಮಿತಿ ಮೀರಿದ್ದರೂ ತನ್ನ ಅಣ್ಣನನ್ನು ಸಬ್ ಇನ್‌ಸ್ಪೆಕ್ಟರ್ ಮಾಡಲು ನಕಲಿ ಜನ್ಮ ದಿನಾಂಕದ ದಾಖಲೆ ಸಲ್ಲಿಸಿದ್ದ ವೈದ್ಯರೊಬ್ಬರ ವಿರುದ್ಧದ ಹೆಚ್ಚುವರಿ ಆರೋಪ ಪಟ್ಟಿಯನ್ನು ಅಂಗೀಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ವಿನಯ್ ಕುಮಾರ್ ಹದ್ದಣ್ಣವರ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದ್ದು, ಪ್ರಕರಣ ಶೀಘ್ರ ಇತ್ಯರ್ಥಗೊಳಿಸಲು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ಅರ್ಜಿದಾರರು ಇಎಸ್‌ಐ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಪ್ರಕರಣ ತಾರ್ಕಿಕ ಅಂತ್ಯ ಕಂಡಲ್ಲಿ ತನ್ನ ಸೇವೆಗೆ ಅಡ್ಡಿಯಾಗಲಿದೆ ಎಂಬ ಕಾರಣದಿಂದ ಒಂದಲ್ಲ ಒಂದು ಅರ್ಜಿಗಳನ್ನು ಸಲ್ಲಿಸಿ ತಡೆಯಾಜ್ಞೆ ಪಡೆಯುತ್ತಿದ್ದು, ಪ್ರಕರಣ ಮುಕ್ತಾಯವಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಪ್ರಕರಣ ಸಂಬಂಧ ಶೀಘ್ರ ನಿರ್ಣಯ ತೆಗೆದುಕೊಳ್ಳುವುದು ನ್ಯಾಯಾಲಯದ ಕರ್ತವ್ಯ ಮಾತ್ರವಲ್ಲದೆ, ಅದಕ್ಕೆ ಸಹಕರಿಸುವುದು ತನಿಖಾಧಿಕಾರಿಗಳು ಮತ್ತು ಆರೋಪಿಗಳ ಜವಾಬ್ದಾರಿಯಾಗಿದೆ. ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯ ಹೆಚ್ಚುವರಿ ಆರೋಪಪಟ್ಟಿ ಪರಿಗಣಿಸಿರುವ ಆದೇಶದಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ ಎಂದು ತಿಳಿಸಿರುವ ಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.