ನ್ಯೂಸ್

ಮೆಟಾ ಸಿಇಒ ಜುಕರ್​ಬರ್ಗ್ ವಿರುದ್ಧ ವಿಚಾರಣೆ ಆರಂಭ

ವಿಲ್ಮಿಂಗ್ಟನ್: ಮೆಟಾ ಸಿಇಒ ಮಾರ್ಕ್ ಜುಕರ್​ಬರ್ಗ್ ಮತ್ತು ಕಂಪನಿಯ ಇತರ ಕೆಲವು ಅಧಿಕಾರಿಗಳ ವಿರುದ್ಧ 8 ಶತಕೋಟಿ ಡಾಲರ್​ನ ಮೊಕದ್ದಮೆಯ ವಿಚಾರಣೆ ಆರಂಭವಾಗಿದೆ. 2018ರ ಕೇಂಬ್ರಿಡ್ಜ್ ಅನಲಿಟಿಕಾ ರಾಜಕೀಯ ಸಲಹಾ ಸಂಸ್ಥೆಗೆ ಸಂಬಂಧಿಸಿದ ಗೌಪ್ಯತೆ ಉಲ್ಲಂಘನೆ ಹಗರಣದಿಂದ ಉದ್ಭವಿಸಿದ ಆರೋಪಗಳನ್ನು ಒಳಗೊಂಡ ಪ್ರಕರಣ ಇದು.

ಫೇಸ್​ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕೇಂಬ್ರಿಡ್ಜ್ ಅನಲಿಟಿಕಾ ದುರುಪಯೋಗ ಮಾಡಿಕೊಳ್ಳುವ ಸಂಭವನೀಯ ಅಪಾಯಗಳನ್ನು ಮೆಟಾ ಮೊದಲೇ ಬಳಕೆದಾರರಿಗೆ ತಿಳಿಸಲಿಲ್ಲ ಎಂಬುದು ದೂರುದಾರರ ಆರೋಪ. ಈ ಸಂಸ್ಥೆ 2016ರಲ್ಲಿ ಡೊನಾಲ್ಡ್ ಟ್ರಂಪ್​ರ ಅಧ್ಯಕ್ಷೀಯ ಚುನಾವಣಾ ಪ್ರಚಾರಕ್ಕೆ ಬೆಂಬಲ ನೀಡಿತ್ತು. ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ತನ್ನ ವಾಣಿಜ್ಯ ಪಾಲುದಾರರಿಗೆ ಮಾರಾಟ ಮಾಡಿದ ಆರೋಪವನ್ನು ಮೆಟಾ ಎದುರಿಸುತ್ತಿದೆ.

ಮೊದಲ ವಿಚಾರಣೆಯಲ್ಲಿ ವಾಷಿಂಗ್ಟನ್ ಯೂನಿವರ್ಸಿಟಿ ಲಾ ಸ್ಕೂಲ್​ನ ಪೊ›ಫೆಸರ್, ಗೌಪ್ಯತೆ ತಜ್ಞ ನೀಲ್ ರಿಚರ್ಡ್ಸ್ ಷೇರುದಾರರ ಪರ ಸಾಕ್ಷ್ಯ ನೀಡಿದರು. ನಂತರ, 2018ರಿಂದ 2020ರವರೆಗೆ ಫೇಸ್​ಬುಕ್​ನಲ್ಲಿ ಸೇವೆ ಸಲ್ಲಿಸಿದ್ದ ಜೆಫ್ರಿ ಜಿಯೆಂಟ್ಸ್ ತಮ್ಮ ಹೇಳಿಕೆ ದಾಖಲಿಸಿದರು. ವಿಚಾರಣೆ ಇನ್ನೂ ಒಂದು ವಾರ ನಡೆಯುವ ನಿರೀಕ್ಷೆಯಿದೆ. ಜುಕರ್​ಬರ್ಗ್ ಕೂಡ ಮುಂದಿನ ದಿನಗಳಲ್ಲಿ ಹೇಳಿಕೆ ನೀಡಬೇಕಾಗುತ್ತದೆ. ತೀರ್ಪು ಬರಲು ಇನ್ನೂ ಸಾಕಷ್ಟು ಸಮಯ ಹಿಡಿಯಲಿದೆ ಎಂದು ಹೇಳಲಾಗುತ್ತಿದೆ.