ಹೊಸನಗರ: ರಾಣೆಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಕೊಲ್ಲೂರು ಮಾರ್ಗದ ಎಬಗೋಡು ಬಳಿ ನಿಧಿ ಆಸೆಗಾಗಿ ಗುಂಡಿ ತೋಡಿರುವುದು ಗುರುವಾರ ಬೆಳಕಿಗೆ ಬಂದಿದೆ.
ಹೆದ್ದಾರಿಗೆ ಹೊಂದಿಕೊಂಡಂತಿರುವ ಧರೆಯ ಮೇಲ್ಭಾಗದಲ್ಲಿ ಶಿವಲಿಂಗದ ಕೆತ್ತನೆ ಇರುವ ಕಲ್ಲಿದ್ದು, ಅದರ ಪಕ್ಕದಲ್ಲಿಯೇ ಗುಂಡಿ ತೋಡಲಾಗಿದೆ. ಶಿವಲಿಂಗಕ್ಕೆ ಅರಿಶಿಣ, ಕುಂಕುಮ ಹಚ್ಚಲಾಗಿದೆ. ಪಕ್ಕದ ಮರದ ಪೊಟರೆಯೊಳಗೆ ಹೂವಿನ ಹಾರ, ಸುತ್ತಲೂ ಅಲ್ಲಲ್ಲಿ ಲಿಂಬೆಹಣ್ಣು ಎಸೆಯಲಾಗಿದೆ. ನಿಧಿ ಶೋಧಕ್ಕಾಗಿ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಹೆದ್ದಾರಿಯಿಂದ ಹತ್ತಿಪ್ಪತ್ತು ಅಡಿ ಅಂತರದಲ್ಲಿ ಈ ಕೃತ್ಯ ನಡೆದಿದೆ. ಎರಡು ವರ್ಷದ ಹಿಂದೆ ಪಕ್ಕದ ಶ್ರೀಧರ ಗುಡ್ಡದ ಮೇಲ್ಭಾಗದಲ್ಲಿರುವ ಶಿವಲಿಂಗದ ಕೆತ್ತನೆ ಇರುವ ಕಲ್ಲಿನ ಪಕ್ಕದಲ್ಲಿ ಇದೇ ರೀತಿ ಗುಂಡಿ ತೋಡಲಾಗಿತ್ತು.
ನಗರ ಭಾಗದಲ್ಲಿ ಹಲವು ವರ್ಷಗಳಿಂದ ನಿಧಿಗಾಗಿ ಶೋಧ ನಡೆಸುವ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಸಮಾಧಿ ಸ್ಥಳ, ಗಳಿಗೆಬಟ್ಟಲು, ಬರೇಕಲ್ ಬತೇರಿ, ಅರೋಡಿ, ಬಸವನಬ್ಯಾಣ, ದರಗಲ್ ಗುಡ್ಡ ಸೇರಿ ಪುರಾತನ ಮಹತ್ವದ ಸ್ಥಳಗಳನ್ನು ನಿಧಿ ಆಸೆಗಾಗಿ ಲೂಟಿಕೋರರು ಧ್ವಂಸಗೊಳಿಸಿದ್ದರು.