ಎಚ್.ಡಿ. ಕೋಟೆ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪಿಎಸ್‌ಐ ಶಕೀಲಾ ಬುಧವಾರ 3,000 ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಂಕಹಳ್ಳಿ ಗ್ರಾಮದ ಕೆಂಡಗಣ್ಣ ನಾಯಕ ಎಂಬುವವರಿಗೆ ಹ್ಯಾಂಡ್‌ಪೋಸ್ಟ್ ಗ್ರಾಮದ ನಾಗೇಂದ್ರ ಸಾಲದ ಹಣ ಬಾಕಿ ನೀಡಬೇಕಾಗಿತ್ತು. ವಸೂಲಿ ಮಾಡಿಕೊಡಲು 5,000 ರೂ. ಲಂಚಕ್ಕೆ ಶಕೀಲಾ ಬೇಡಿಕೆ ಇಟ್ಟಿದ್ದರು. 2,000 ರೂ. ಮುಂಗಡ ನೀಡಲಾಗಿತ್ತು. ಮತ್ತೆ 3,000 ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತ ಪೊಲೀಸರಿಗೆ ಕೆಂಡಗಣ್ಣ ನಾಯಕ ದೂರು ನೀಡಿದ್ದರು. ಲೋಕಾಯುಕ್ತ ಡಿವೈಎಸ್ಪಿ ಕೃಷ್ಣಯ್ಯ ನೇತೃತ್ವದಲ್ಲಿ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ.