ಸೊರಬ ಪಟ್ಟಣದಲ್ಲಿ ಬಿಡಾಡಿ ದನಗಳ ಹಿಡಿದು ಗೋಶಾಲೆಗೆ ಬಿಡುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಪುರಸಭೆ ಮುಖ್ಯಾಧಿಕಾರಿ ಚಂದನ್‌ಗೆ ಮನವಿ ಸಲ್ಲಿಸಲಾಯಿತು. ಲೋಕೇಶ್, ಚಿದಾನಂದ ಗೌಡ, ರವಿ ಗುಡಿಗಾರ್, ರಾಘು ಆಚಾರ್ ಇತರರಿದ್ದರು.  
ನ್ಯೂಸ್

ಬಿಡಾಡಿ ದನಗಳನ್ನು ಗೋಶಾಲೆಗೆ ಸಾಗಿಸಿ

ಶಿವಕುಮಾರ ಎಸ್.ಪಿ.

ಸೊರಬ: ಪಟ್ಟಣದಲ್ಲಿ ಬಿಡಾಡಿ ದನಗಳನ್ನು ಹಿಡಿದು ವಾಹನ ಸವಾರರಿಗೆ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಆಗ್ರಹಿಸಿ ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ, ಹಿಂದು ಜಾಗರಣಾ ವೇದಿಕೆ, ಬಜರಂಗದಳ ಪದಾಧಿಕಾರಿಗಳು ಪುರಸಭೆ ಕಚೇರಿ ಎದುರು ಕಾಲಿನ ಮೂಳೆ ಮುರಿದ ಕರುವನ್ನಿಟ್ಟು ಪ್ರತಿಭಟನೆ ನಡೆಸಿದರು.

ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ರಾತ್ರಿ ವೇಳೆ ರಸ್ತೆಯಲ್ಲೇ ಮಲಗುತ್ತವೆ. ಮಂಗಳವಾರ ಸಂತೆ ನಡೆಯುವುದರಿಂದ ಮಾರುಕಟ್ಟೆ ತುಂಬ ಬಿಡಾಡಿ ದನಗಳೇ ಇರುತ್ತವೆ. ರಸ್ತೆಯಲ್ಲೇ ದನಗಳು ಕಾದಾಡುತ್ತವೆ. ಇದರಿಂದ ವಾಹನ ಸವಾರರು, ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ ಎಂದು ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್.ಚಿದಾನಂದ ಗೌಡ ದೂರಿದರು.

ಹಿಂದು ಜಾಗರಣಾ ವೇದಿಕೆ ಜಿಲ್ಲಾ ಸಹ ಸಂಯೋಜಕ ಲೋಕೇಶ್ ಮಾತನಾಡಿ, ಇತ್ತೀಚೆಗೆ ಎಪಿಎಂಸಿ ಸಮೀಪ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೂರು ದನಗಳು ಮೃತಪಟ್ಟಿವೆ. ಒಂದು ಕರು ಗಾಯಗೊಂಡಿದೆ. ಇದಕ್ಕೆ 15 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಪಟ್ಟಣದಲ್ಲಿ ಅನೇಕ ಅವಘಡಗಳು ಸಂಭವಿಸಿವೆ. ಹಾಗಾಗಿ ಜಾನುವಾರುಗಳ ಮಾಲೀಕರಿಗೆ ಎಚ್ಚರಿಕೆ ನೀಡಿ, ಮನೆಯಲ್ಲಿ ಕಟ್ಟಿಹಾಕಲು ಆದೇಶ ನೀಡಬೇಕು. ಇಲ್ಲವಾದಲ್ಲಿ ಪುರಸಭೆಯಿಂದ ದನಗಳನ್ನು ಹಿಡಿದು ಬೇರೆಡೆ ಬಿಡಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಎಚ್.ವಿ.ಚಂದನ್ ಮಾತನಾಡಿ, ಜಾನುವಾರುಗಳ ಮಾಲಿಕರಿಗೆ ಶೀಘ್ರವೇ ನೋಟಿಸ್ ನೀಡಲಾಗುವುದು. ಮಾಲೀಕರಿಲ್ಲದ ಜಾನುವಾರುಗಳನ್ನು ಗೋಶಾಲೆಗೆ ಕಳುಹಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಬಜರಂಗದಳ ತಾಲೂಕು ಸಹ ಸಂಚಾಲಕ ರವಿ ಗುಡಿಗಾರ್, ಹಿಂದು ಜಾಗರಣಾ ವೇದಿಕೆ ಸಹ ಸಂಚಾಲಕ ರಾಘು ಆಚಾರ್, ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಉಪಾಧ್ಯಕ್ಷ ದತ್ತಾ, ಕಾರ್ಯದರ್ಶಿ ಶರತ್ ಸ್ವಾಮಿ, ಸಹ ಕಾರ್ಯದರ್ಶಿ ನಾಗಪ್ಪ, ಹಾಲೇಶ್, ಕೇಶವ ಪೇಟ್ಕರ್ ಇತರರಿದ್ದರು.