ನ್ಯೂಸ್

ಸಾರಿಗೆ ನಿಗಮಗಳ ಖಾಲಿ ಹುದ್ದೆಗಳು ಶೀಘ್ರವೇ ಭರ್ತಿ; ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ 13 ಸಾವಿರ ಹುದ್ದೆಗಳು ಶೀಘ್ರವೇ ಭರ್ತಿಯಾಗಲಿವೆ. ಸಂಬಂಧಿತ ಪ್ರಸ್ತಾವನೆ ಆರ್ಥಿಕ ಇಲಾಖೆ ಮುಂದಿದೆ. ವಾರ್ಷಿಕ ಶೇ.10ರಷ್ಟು ಸಿಬ್ಬಂದಿ ಸೇವೆಯಿಂದ ವಯೋನಿವೃತ್ತರಾಗುತ್ತಿದ್ದು, ಹಲವಾರು ವರ್ಷಗಳಿಂದ ಖಾಲಿ ಹುದ್ದೆಗಳಿಗೆ ಹೊಸದಾಗಿ ನೇಮಕಗಳಾಗಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮಾಹಿತಿ ನೀಡಿದರು.

ವಿಧಾನಸೌದ ಮಹಾದ್ವಾರದ ಮೆಟ್ಟಿಲು ಬಳಿ ಶನಿವಾರ ಏರ್ಪಡಿಸಿದ್ದ ಕೆಎಸ್‌ಆರ್‌ಟಿಸಿ ನೂತನ ಬಸ್‌ಗಳ ಲೋಕಾರ್ಪಣೆ ನಂತರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರಿಗೆ ನಿಗಮಗಳಲ್ಲಿ 24 ಸಾವಿರ ಬಸ್‌ಗಳು ಪ್ರತಿದಿನ 1.58 ಲಕ್ಷ ಟ್ರಿಪ್ ಸಂಚರಿಸುತ್ತಿದೆ. ಅದೇ ರೀತಿ ವಾರ್ಷಿಕ ಶೇ.10ರಷ್ಟು ಬಸ್‌ಗಳು ಗುಜರಿಗೆ ಹೋಗುತ್ತವೆ. ಶೇ.10ರಷ್ಟು ಸಿಬ್ಬಂದಿ ಸೇವೆಯಿಂದ ವಯೋ ನಿವೃತ್ತರಾಗುತ್ತಾರೆ.

ಕಳೆದ ಏಳು ವರ್ಷಗಳಿಂದ ನಿಗಮಗಳಲ್ಲಿ ಸಿಬ್ಬಂದಿ ನೇಮಕವಾಗಿಲ್ಲ. ನಾಲ್ಕು ವರ್ಷಗಳಿಂದ ಹೊಸ ಬಸ್‌ಗಳನ್ನು ಖರೀದಿಸಿಲ್ಲ. ಹಿಂದಿನ ಸರ್ಕಾರ ಪೇಪರ್ ವರ್ಕ್ ಮಾಡಿದ್ದ 100 ಸಾರಿಗೆ, 40 ನಾನ್ ಎಸಿ ಸ್ಲೀಪರ್ ಬಸ್‌ಗಳು ಇದೀಗ ಕಾರ್ಯಾಚರಣೆಗೆ ಇಳಿದಿವೆ ಎಂದು ವಿವರಿಸಿದರು.

ಹೊಸ ಬಸ್‌ಗಳ ಖರೀದಿ

ಶಕ್ತಿ ಯೋಜನೆಯಿಂದಾಗಿ ನಿಗಮಗಳ ಬಸ್‌ಗಳಿಗೆ ಬೇಡಿಕೆ ಹೆಚ್ಚಿದ್ದು, ಪ್ರಯಾಣಿಕರ ಸಂಖ್ಯೆಯೂ ಏರುಗತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆರು ತಿಂಗಳೊಳಗೆ 4,500 ಹೊಸ ಬಸ್‌ಗಳನ್ನು ಖರೀದಿಸಿ ಎಲ್ಲ ನಿಗಮಗಳಿಗೆ ಹಂಚಿಕೆ ಮಾಡಲಾಗುವುದು ಎಂದು ರಾಮಲಿಂಗರೆಡ್ಡಿ ತಿಳಿಸಿದರು.

ಬಸ್‌ಗಳ ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಸಂಚಾರದ ಮಾರ್ಗಗಳನ್ನು ಹೆಚ್ಚಳ ಮಾಡಬೇಕಾಗಿದೆ. ಕರೊನಾ ಹಿನ್ನೆಲೆಯಲ್ಲಿ 2,800 ಶೆಡ್ಯೂಲ್‌ಗಳನ್ನು ಪುನರಾರಂಭಿಸಬೇಕಿದ್ದು, ಶಕ್ತಿ ಯೋಜನೆಗೆ ಮತ್ತಷ್ಟು ಶಕ್ತಿ ತುಂಬಲು ಸರ್ಕಾರ ಬದ್ಧವಾಗಿದೆ ಎಂದರು.

ರಾಜ್ಯದ ಸಾರಿಗೆ ನಿಗಮಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಕೆಎಸ್‌ಆರ್‌ಟಿಸಿ 300, ಬಿಎಂಟಿಸಿ 100 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಉತ್ತಮಗುಣಮಟ್ಟದ ಸೇವೆ, ದಕ್ಷತೆಯಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಮೇಲ್ಪಂಕ್ತಿಯಾಗಿದ್ದಾರೆ ಎಂದು ರಾಮಲಿಂಗರೆಡ್ಡಿ ಪ್ರಶಂಸಿಸಿದರು.

ಇದಕ್ಕೂ ಮುನ್ನ ನೂತನವಾಗಿ ಲೋಕಾರ್ಪಣೆಯಾದ ಹವಾನಿಯಂತ್ರಣರಹಿತ ‘ಪಲ್ಲಕ್ಕಿ’ ಸ್ಲೀಪರ್ ಬಸ್‌ಗಳನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಜತೆಗೆ ರಾಮಲಿಂಗರೆಡ್ಡಿ ವೀಕ್ಷಿಸಿದರು. ಒಟ್ಟು 40 ‘ಪಲ್ಲಕ್ಕಿ’ ಬಸ್‌ಗಳು ಕೆಎಸ್‌ಆರ್‌ಟಿಸಿಗೆ ಸೇರ್ಪಡೆಯಾಗಿವೆ. ಈ ಪೈಕಿ 30 ರಾಜ್ಯದೊಳಗೆ, 10 ಬಸ್‌ಗಳು ಹೊರರಾಜ್ಯಗಳಿಗೆ ಸಂಚರಿಸಲಿವೆ.