ಬೆಂಗಳೂರು: ಲಾಕ್ಡೌನ್ಗೂ ಮುಂಚೆ ವಿವಿಧ ದೇಶಗಳಿಂದ ಭಾರತಕ್ಕೆ ಬಂದು ಇಲ್ಲಿಯೇ ಉಳಿಯುವಂತಾಗಿದ್ದವರನ್ನು ಇದೀಗ ವಿಶೇಷ ವಿಮಾನದ ಮೂಲಕ ತಂತಮ್ಮ ದೇಶಗಳಿಗೆ ಕಳುಹಿಸಲಾಗುತ್ತಿದೆ.
ಕರೊನಾ ಸೋಂಕು ಹರಡುವಿಕೆ ತಡೆಯುವ ಸಲುವಾಗಿ ಲಾಕ್ಡೌನ್ ಘೋಷಿಸಿ, ಎಲ್ಲ ಬಗೆಯ ನಾಗರಿಕ ವಿಮಾನ ಹಾರಾಟ ರದ್ದು ಮಾಡಲಾಗಿದೆ. ಪರಿಣಾಮ ನೂರಾರು ವಿದೇಶಿಗರು ಭಾರತದಲ್ಲೇ ಉಳಿಯುವಂತಾಗಿದೆ. ಅಂಥವರನ್ನು ತಮ್ಮ ದೇಶಗಳಿಗೆ ವಾಪಸ್ ಕರೆಸಿಕೊಳ್ಳಲು ಮುಂದಾಗಿರುವ ಆಯಾ ದೇಶದ ರಾಯಭಾರ ಕಚೇರಿ ವಿಶೇಷ ವಿಮಾನಗಳನ್ನು ಆಯೋಜಿಸಿದೆ. ಕೇಂದ್ರ ಸರ್ಕಾರದ ಅನುಮತಿಯಂತೆ ಇಟಲಿಯ ರಾಯಭಾರ ಕಚೇರಿ ಮಂಗಳವಾರ ತನ್ನ ದೇಶದ 86 ಪ್ರಜೆಗಳು ಮತ್ತು ಇನ್ನಿತರ ಯೂರೋಪ್ ದೇಶಗಳ 80 ಪ್ರಜೆಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ರೋಮ್ ಗೆ ಕರೆದೊಯ್ಯಲಾಗಿದೆ. ಅವರಲ್ಲಿ ಗೋಕರ್ಣ ದಲ್ಲಿ ಸಿಲುಕಿದ್ದ ಇಟಲಿ ಪ್ರಜೆಗಳು ಸೇರಿದ್ದು, ಕೇರಳದಲ್ಲಿದ್ದವರೂ ಇದ್ದಾರೆ.
ಬ್ರಿಟನ್ ಪ್ರಜೆಗಳು ರವಾನೆ: ಇದೇ ಮಾದರಿಯಲ್ಲಿ ಇಂಗ್ಲೆಂಡ್ ತನ್ನ ಪ್ರಜೆಗಳನ್ನು ವಿಶೇಷ ವಿಮಾನದ ಮೂಲಕ ಕರೆದೊಯ್ದಿದೆ. ಸೋಮವಾರ 292 ಬ್ರಿಟನ್ ಪ್ರಜೆಗಳನ್ನು ಬ್ರಿಟೀಷ್ ಏರ್ವೇಸ್ ವಿಮಾನದ ಮೂಲಕ ಕೊಂಡೊಯ್ಯಲಾಗಿದೆ. ಅದೇ ರೀತಿ ಉಳಿದವರನ್ನು ಕರೆದೊಯ್ಯಲು ಬುಧವಾರ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಅಹಮದಾಬಾದ್ ಮೂಲಕ ಲಂಡನ್ಗೆ ವಿಶೇಷ ವಿಮಾನ ಸೇವೆ ನಿಗದಿ ಮಾಡಲಾಗಿತ್ತು.