ನ್ಯೂಸ್

ತೃತೀಯ ಲಿಂಗಿಗಳ ಪರದಾಟ: ಟಿಜಿ ಪ್ರಮಾಣಪತ್ರಕ್ಕೆ ತೊಂದರೆ; ಮೀಸಲು ಸಿಕ್ಕರೂ ಪ್ರಯೋಜನವಿಲ್ಲ

Webdesk - Ravikanth

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಸುಪ್ರೀಂ ಕೋರ್ಟ್ ಸೂಚನೆಯಂತೆ ರಾಜ್ಯ ಸರ್ಕಾರ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಶೇ.1 ಮೀಸಲಾತಿ ಕಲ್ಪಿಸಿದ್ದರೂ ಸಕಾಲಕ್ಕೆ ಅಗತ್ಯ ಪ್ರಮಾಣ ಪತ್ರಗಳು ದೊರೆಯದೆ, ಸಿಕ್ಕ ಮೀಸಲಾತಿ ಪ್ರಯೋಜನಕ್ಕೆ ಬಾರದಂತಾಗಿದೆ.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧಿಸೂಚನೆ ಅನ್ವಯ ಕೇಂದ್ರ ಸರ್ಕಾರ ಹೊರಡಿಸಿರುವ ತೃತೀಯ ಲಿಂಗ ವ್ಯಕ್ತಿಗಳ (ರಕ್ಷಣಾ ಹಕ್ಕುಗಳು) ನಿಯಮಗಳು, 2020 ಅನ್ವಯ ಸಂಬಂಧಪಟ್ಟ ಪ್ರಮಾಣಪತ್ರವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್​ನಿಂದ (ಜಿಲ್ಲಾಧಿಕಾರಿ) ಪಡೆಯಬೇಕು. ಪ್ರಮಾಣಪತ್ರ ಇಲ್ಲದಿದ್ದರೇ ತೃತೀಯ ಲಿಂಗದ ಮೀಸಲಾತಿಗೆ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಆದರೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವೆಬ್​ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಸಿದರೆ ಐದು ದಿನಗಳ ಬಳಿಕ ರಸೀದಿ ದೊರೆಯಲಿದೆ. ಈ ರಸೀದಿ ಸಿಕ್ಕ ಮೇಲೆ ಜಿಲ್ಲಾ ಮ್ಯಾಜಿಸ್ಟ್ರೇಟ್​ಗೆ ಅರ್ಜಿ ಸಲ್ಲಿಸಬೇಕು. ಅದರಲ್ಲಿ ತೃತೀಯ ಹೆಣ್ಣು ಅಥವಾ ತೃತೀಯ ಗಂಡು ಎಂದು ಸ್ವಯಂ ಘೋಷಣ ಪ್ರಮಾಣಪತ್ರ ಸಲ್ಲಿಸಿದ ಮೇಲೆ ಸಕಾಲ ಸೇವೆಯಲ್ಲಿ ಒಳಪಡದ ಕಾರಣ ಸರ್ಟಿಫಿಕೇಟ್ ನೀಡಲು 60 ದಿನಗಳ ಸಮಯ ಇರುತ್ತದೆ. ಬೇರೆಯವರಿಗೆ ಇಲ್ಲದ ಸಮಸ್ಯೆ ನಮಗೆ ಏಕೆ? ಒಂದು ಕಡೆಯಿಂದ ಮೀಸಲಾತಿ ಕೊಟ್ಟು ಮತ್ತೊಂದು ಕಡೆ ಕೊಕ್ಕೆ ಹಾಕಿದಂತಾಗಿದೆ ಎಂದು ತೃತೀಯ ಲಿಂಗಿಗಳು ಅಸಮಾಧಾನ ಹೊರಹಾಕಿದ್ದಾರೆ.

ಟಿಜಿ ಸರ್ಟಿಫಿಕೇಟ್ ಸುಲಭವಾಗಿ ಸಿಗುತ್ತಿಲ್ಲ. ತೃತೀಯ ಲಿಂಗಿಗಳ ಸಮಸ್ಯೆ, ಪರಿಹಾರದ ಬಗ್ಗೆ ಚರ್ಚೆ ನಡೆಸಲು ಸಮುದಾಯದ ಜನರಿಂದ ಮಾತ್ರ ಸಾಧ್ಯ. ಈ ಬಗ್ಗೆ ಸರ್ಕಾರ ದೃಢ ನಿರ್ಧರ ತೆಗೆದುಕೊಂಡು ಸೌಲಭ್ಯ ಸಿಗುವಂತೆ ವ್ಯವಸ್ಥೆ ನಿರ್ಮಾಣ ಮಾಡಬೇಕು. | ಅಕೈ ಪದ್ಮಶಾಲಿ ಸಾಮಾಜಿಕ ಕಾರ್ಯಕರ್ತೆ

ಅಧಿಕಾರಿಗಳಿಗೆ ಅರಿವಿನ ಕೊರತೆ: ಸುಪ್ರೀಂ ಕೋರ್ಟ್ ಆದೇಶದಂತೆ ಸರ್ಕಾರಿ ಉದ್ಯೋಗದಲ್ಲಿ ತೃತೀಯ ಲಿಂಗಿಗಳಿಗೆ ಶೇ.1 ಮೀಸಲಾತಿ ಕಲ್ಪಿಸಲಾಗಿದೆ. ಯಾವ ರೀತಿ ಕಲ್ಪಿಸಬೇಕೆಂಬ ಅರಿವು ಸರ್ಕಾರಕ್ಕೆ ಇಲ್ಲ. ಟಿಜಿ ಪ್ರಮಾಣಪತ್ರ ನೀಡುವ ಅಧಿಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಮಿಟಿಗೆ ನೀಡಿರುವುದು ಸರಿಯಲ್ಲ. ತೃತೀಯ ಲಿಂಗಿಗಳು ಎಲ್ಲರಂತೆ ಸ್ವಯಂ ಘೋಷಣಪತ್ರ ಸಲ್ಲಿಸುವ ಅಧಿಕಾರ ನೀಡಬೇಕು. ಕಮಿಟಿಯಲ್ಲಿ ಸಮುದಾಯದವರು ಇರುವಂತೆ ನೋಡಿಕೊಳ್ಳಬೇಕಿದೆ ಎಂದು ಸಲಹೆ ಕೇಳಿಬಂದಿದೆ.

ಬರಿಗೈಯಲ್ಲಿ ವಾಪಸ್: ಕುಟುಂಬದ ಆಶ್ರಯದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಪಾಲಕರಿಗೆ ನಾವು ತೃತೀಯ ಲಿಂಗಿಗಳು ಎಂಬುದು ಗೊತ್ತಾದ ಕೂಡಲೇ ಮನೆಯಿಂದ ಹೊರಗೆ ಹಾಕುತ್ತಾರೆ. ಆಗ ಎಸ್​ಎಸ್​ಎಲ್​ಸಿ, ಪಿಯುಸಿ ಅಥವಾ ಪದವಿ ಅಂಕಪಟ್ಟಿ, ಆಧಾರ್, ಜಾತಿ, ಆದಾಯ ಪ್ರಮಾಣಪತ್ರ ಎಲ್ಲವನ್ನು ಬಿಟ್ಟು ಬರಿಗೈಯಲ್ಲಿ ಮನೆಯಿಂದ ಹೊರಗೆ ಬರಬೇಕಾಗುತ್ತದೆ ಎಂದು ತೃತೀಯ ಲಿಂಗಿ ಪ್ರಥಮ್ ಅವರು ‘ವಿಜಯವಾಣಿ’ಗೆ ತಮ್ಮ ನೋವು ಹಂಚಿಕೊಂಡಿದ್ದಾರೆ. ಮತ್ತೆ ಆ ಎಲ್ಲ ದಾಖಲೆ ಪಡೆಯಲು ಕುಟುಂಬದ ಸದಸ್ಯರು ಸಹಕರಿಸುತ್ತಿಲ್ಲ. ಸಿಕ್ಕರೂ ಪ್ರಮಾಣಪತ್ರ ನವೀಕರಣ ಮಾಡಬೇಕಾದರೆ ಪಾಲಕರ ಆಧಾರ್, ಪಡಿತರ ಚೀಟಿ ಕಡ್ಡಾಯವಾಗಿದೆ. ಮತ್ತೆ ಇಲ್ಲಿ ಹಿನ್ನಡೆಯಾಗುತ್ತಿದೆ. ಪ್ರತಿಯೊಂದು ವರ್ಗಕ್ಕೂ ಮೀಸಲಾತಿ ಜತೆಗೆ ಅಂಕಗಳಲ್ಲಿ ದೇಹದಾರ್ಢ್ಯದಲ್ಲಿ ವಿನಾಯಿತಿ ನೀಡಲಾಗಿದೆ. ಆದರೆ, ತೃತೀಯ ಲಿಂಗಿಗಳಿಗೆ ವಿಶೇಷ ಸವಲತ್ತು ನೀಡಿಲ್ಲ ಎಂದು ಪ್ರಥಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಗಳಿಗೆ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿಯಲ್ಲಿ ಶೇ.1 ಮೀಸಲಾತಿ ಕಲ್ಪಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಇದಾದ ಮೇಲೆ ಹೈಕೋರ್ಟ್, ಬೆಸ್ಕಾಂ ಸೇರಿ ವಿವಿಧ ಇಲಾಖೆಗಳಲ್ಲಿ ಇರುವ ಖಾಲಿ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ ಮುಂದುವರಿಸಲಾಗಿದೆ.