ಶಿವಮೊಗ್ಗ: ಅಕ್ಷರ ಕಲಿಕೆಯಿಂದ ಪ್ರತಿಯೊಬ್ಬರ ಬದುಕಿನಲ್ಲೂ ಪರಿವರ್ತನೆ ಕಂಡುಕೊಳ್ಳಲು ಸಾಧ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ನ್ಯಾಯಾಧೀಶ ಎಂ.ಎಸ್.ಸಂತೋಷ್ ಹೇಳಿದರು.
ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ಸೋಮವಾರ ಶಿವಮೊಗ್ಗ ಜಿಲ್ಲಾ ಪಂಚಾಯತ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಇಲಾಖೆ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಮತ್ತು ಕೇಂದ್ರ ಕಾರಾಗೃಹದ ಸಹಯೋಗದಲ್ಲಿ 59ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಉದ್ಘಾಟಿಸಿ ಮಾತನಾಡಿದ ಅವರು, ಓದು ಬರಹ ಕಲಿತು ಸಾಕ್ಷರರಾಗುವುದರಿಂದ ಯಾವುದು ಸರಿ ಯಾವುದು ತಪ್ಪು ಎಂಬ ತಿಳುವಳಿಕೆ ಮನಸ್ಸಿನಲ್ಲಿ ಮೂಡುತ್ತದೆ. ಕಾನೂನಿನ ಕುರಿತು ಸರಿಯಾದ ಅರಿವನ್ನು ಪಡೆದುಕೊಳ್ಳಲು ಕಲಿಕೆಯಿಂದ ಸಹಾಯವಾಗುತ್ತದೆ. ಇದರಿಂದ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಬಹುದು ಎಂದರು.
ಸರ್ಕಾರದಿಂದ ಕಾರಾಗೃಹಗಳಲ್ಲೂ ಅನುಷ್ಠಾನಗೊಂಡಿರುವ ಸಾಕ್ಷರತಾ ಯೋಜನೆಯಿಂದ ಓದು ಬರಹ ಕಲಿತ ಬಂದಿಗಳು ತಮ್ಮ ಪ್ರಕರಣಗಳ ಕುರಿತು ಸೂಕ್ತ ಅರಿವನ್ನು ಪಡೆದು ಜೈಲಿನಿಂದ ಬಿಡುಗಡೆ ಹೊಂದಲು ಅಕ್ಷರಜ್ಞಾನ ಸಹಕಾರಿಯಾಗುತ್ತದೆ. ಬಂದಿಗಳಿಗೆ ಉಚಿತ ಕಾನೂನು ಮಾಹಿತಿ ಮತ್ತು ಅಗತ್ಯ ನೆರವನ್ನು ಒದಗಿಸುವ ಉದ್ದೇಶದಿಂದ ಕಾರಾಗೃಹಗಳಲ್ಲಿ ಈಗಾಗಲೇ ಪಿಎಲ್‌ವಿಗಳ ನೇಮಕ ಮಾಡಲಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಿಎಲ್‌ವಿಗಳ ನೇಮಕ ಮಾಡಲು ಕ್ರಮ ತೆಗೆದುಕೊಳ್ಳುವ ಮೂಲಕ ಜೈಲುವಾಸಿಗಳು ತಮ್ಮ ಪ್ರಕರಣಗಳಲ್ಲಿ ಶೀಘ್ರ ಬಿಡುಗಡೆ ಹೊಂದಲು ನೆರವು ಕಲ್ಪಿಸಲಾಗುವುದು ಎಂದು ಹೇಳಿದರು.
ಶಿವಮೊಗ್ಗ ಡಯಟ್‌ನ ಹಿರಿಯ ಉಪನ್ಯಾಸಕಿ ಎಸ್.ರೇಣುಕಾ ಮಾತನಾಡಿ, ವಿದ್ಯೆಯಿಂದ ವಿವೇಕ ಲಭಿಸುತ್ತದೆ. ವಿವೇಕವನ್ನು ಹೊಂದಿದಾಗ ಪರಿಪೂರ್ಣ ಜ್ಞಾನ ಸಿಗುತ್ತದೆ. ಅಕ್ಷರ ಕಲಿತ ಮನುಷ್ಯ ಸುಸಂಸ್ಕೃತ ವ್ಯಕ್ತಿಯಾಗಿ ರೂಪುಗೊಂಡು ಮನುಷ್ಯನಾಗಿ ಬಾಳಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ಪಿ.ರಂಗನಾಥ, ಓದು ಬರಹ ಕಲಿಯುವುದರಿಂದ ನಡತೆಯಲ್ಲಿ ಉತ್ತಮ ಬದಲಾವಣೆ ಮೂಡಿಬರುತ್ತದೆ. ಸಮಾಜದಲ್ಲಿ ಗೌರವ, ಸ್ಥಾನಮಾನಗಳನ್ನು ಪಡೆಯಲು ಸಾಕ್ಷರತೆ ನೆರವಾಗುತ್ತದೆ ಎಂದು ಹೇಳಿದರು.
ಡಯಟ್‌ನ ಹಿರಿಯ ಉಪನ್ಯಾಸಕ ಕೆ.ಆರ್.ಉಮಾಶಂಕರ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆರ್. ಆಶಾ, ಉಪನ್ಯಾಸಕ ರಮೇಶ್‌ಬಾಬು, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಅಸ್ಗರ್ ಅಲಿ, ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಬಿ.ಸುರೇಶ್, ಮಹಿಳಾ ಕೇಂದ್ರ ಕಾರಾಗೃಹದ ಅಧೀಕ್ಷಕಿ ಭವ್ಯ, ಕೇಂದ್ರ ಕಾರಾಗೃಹದ ಜೈಲರ್‌ಗಳಾದ ಶ್ರೀಶೈಲ ಎಸ್. ಕಟ್ಟಿಮನಿ, ಶರಣಬಸವ, ವಿಜಯಕುಮಾರ್, ಸಂಸ್ಥೆಯ ಶಿಕ್ಷಕರಾದ ಎಸ್.ಎನ್.ಲೀಲಾ, ಗೋಪಾಲಕೃಷ್ಣ ಉಪಸ್ಥಿತರಿದ್ದರು.
ಬಂದಿವಾಸಿಗಳಿಂದ ಕಿರುನಾಟಕ ಪ್ರದರ್ಶನ
ಸಾಕ್ಷರತೆ ಮಹತ್ವ ಕುರಿತು ಕಾರಾಗೃಹದ ಬಂದಿನಿವಾಸಿಗಳು ಕಿರುನಾಟಕ ಪ್ರದರ್ಶಿಸಿದರು. ಓದು ಬರಹ ಕಲಿತ ಬಂದಿಯ ಬದುಕಿನಲ್ಲಿ ಸಾಕ್ಷರತೆಯಿಂದ ಸಿಗುವ ಮಹತ್ವದ ತಿರುವು ಕುರಿತು ಬೆಳಕು ಚೆಲ್ಲುವ ಅಕ್ಷರ ಅರಿವಿನ ಕಿರಣ ಕಿರುನಾಟಕ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಬಂದಿನಿವಾಸಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಕ್ಷರತಾ ಪ್ರಮಾಣವಚನ ಸ್ವೀಕರಿಸಿದರು. ಶಿವಮೊಗ್ಗ ಡಯಟ್‌ನ ಉಪನ್ಯಾಸಕ ಎಚ್.ಬಿ.ಹೂವಣ್ಣ ಅವರು ರಚಿಸಿದ ಸಾಕ್ಷರರಾಗೋಣ ಎಂಬ ಸಾಕ್ಷರಗೀತೆಯನ್ನು ಬಂದಿನಿವಾಸಿಗಳು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ಇದೇ ವೇಳೆ ಶಿಕ್ಷಕರ ದಿನದ ಅಂಗವಾಗಿ ಡಯಟ್‌ನ ಹಿರಿಯ ಉಪನ್ಯಾಸಕಿ ಎಸ್.ರೇಣುಕಾ, ಕೇಂದ್ರ ಕಾರಾಗೃಹದ ಶಿಕ್ಷಕರಾದ ಗೋಪಾಲಕೃಷ್ಣ ಮತ್ತು ಎಸ್.ಎನ್.ಲೀಲಾ ಅವರನ್ನು ಸನ್ಮಾನಿಸಿ ಗುರುನಮನ ಸಲ್ಲಿಸಲಾಯಿತು.