ನ್ಯೂಸ್

ಪಿಯು ಉಪನ್ಯಾಸಕರ ವರ್ಗಾವಣೆ: ಕೌನ್ಸೆಲಿಂಗ್‌ನಲ್ಲಿ ಉಪನ್ಯಾಸಕರ ಹೆಸರು ಪ್ರದರ್ಶಿಸುವಂತೆ ಆಗ್ರಹ

ಬೆಂಗಳೂರು: ಪಿಯು ಉಪನ್ಯಾಸಕರ ವರ್ಗಾವಣೆಯಲ್ಲಿ ವಿಷಯವಾರು 40 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಕಾಲೇಜುಗಳ ಉಪನ್ಯಾಸಕರ ಹೆಸರನ್ನು ಕೌನ್ಸೆಲಿಂಗ್‌ನಲ್ಲಿ ಪ್ರದರ್ಶಿಸುವಂತೆ ಉಪನ್ಯಾಸಕರ ಸಂಘವು ಒತ್ತಾಯಿಸಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಾರ್ವತ್ರಿಕ ವರ್ಗಾವಣೆ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಿದ್ದು, ಆ.11ರಿಂದ 24ರ ವರೆಗೆ ನಡೆಯಲಿದೆ. ಆದರೆ, ವರ್ಗಾವಣೆಗೆ ನಿಗದಿ ಪಡಿಸಿರುವ ಷರತ್ತಿನ ಬಗ್ಗೆ ಉಪನ್ಯಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

2023ನೇ ಸಾಲಿನ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆಯಲ್ಲಿ ವಿಷಯವಾರು 40 ವಿದ್ಯಾರ್ಥಿಗಳ ಸಂಖ್ಯೆಯನ್ನು ನಿಗದಿಗೊಳಿಸಿ, 40ಕ್ಕಿಂತ ಕಡಿಮೆ ಇರುವ ವಿಷಯಗಳ ಉಪನ್ಯಾಸಕ ಹುದ್ದೆಗಳನ್ನು ,ಉಪನ್ಯಾಸಕರ ಕೌನ್ಸಿಲಿಂಗ್‌ನಲ್ಲಿ ತೋರಿಸದಂತೆ ಇಲಾಖೆಯ ನಿರ್ದೇಶಕರು ಜಿಲ್ಲಾ ಉಪನಿರ್ದೇಶಕರಿಗೆ ಮೌಖಿಕ ನಿರ್ದೇಶನ ನೀಡಿದ್ದಾರೆ. ಇದರಿಂದ ಪರೋಕ್ಷವಾಗಿ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಇಲ್ಲದಂತೆ ಮಾಡುವುದು ಇಲಾಖೆ ಉದ್ದೇಶವಾಗಿದೆ. ಇದು ಸರಿಯಾದ ಕ್ರಮವಲ್ಲವೆಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.

ನಿಯಮ ಸಡಿಲಿಸುವಂತೆ ಆಗ್ರಹ:

ಷರತ್ತು ಸಡಿಲಿಸದಿದ್ದರೆ, ತಾತ್ಕಾಲಿಕವಾಗಿ ಕೌನ್ಸೆಲಿಂಗ್ ತಡೆಹಿಡಿಯಬೇಕೆಂದು ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ ಆಗ್ರಹಿಸಿದ್ದಾರೆ. ಈ ವಿಚಾರವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ಉಪನ್ಯಾಸಕರು ಚರ್ಚೆ ನಡೆಸಿದ್ದು, ಗ್ರಾಮಾಂತರ ಪ್ರದೇಶದ ಕಾಲೇಜುಗಳು ಉಳಿಯಬೇಕಾದರೆ, ಷರತ್ತು ತೆಗೆಯಬೇಕು ಎಂದು ಮನವಿ ಮಾಡಿದ್ದಾರೆ.

ವರ್ಗಾವಣೆಗೆ 82 ಪ್ರಾಂಶುಪಾಲರು, 2397 ಉಪನ್ಯಾಸಕರು ವಿವಿಧ ಆದ್ಯತೆ ಅಡಿ ಅರ್ಜಿ ಸಲ್ಲಿಸಿದ್ದಾರೆ.