ನ್ಯೂಸ್

ಅಂತರ ಘಟಕ ವರ್ಗಾವಣೆಗೆ ನಿರ್ಬಂಧ ಬೇಡ: ಆಯುಕ್ತರಿಗೆ ಮನವಿ

ರಾಮನಗರ:  ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆ ಖಾಲಿಯಿರುವ ನೆಪದಲ್ಲಿ ವರ್ಗಾವಣೆಗೆ ಕಡಿವಾಣ ಹಾಕಬಾರದು. ವರ್ಗಾವಣೆ ಸಂದರ್ಭದಲ್ಲಿ ಶೇ.25ಕ್ಕಿಂತ ಹೆಚ್ಚು ಹುದ್ದೆ ಖಾಲಿ ಇರುವ ತಾಲೂಕುಗಳಲ್ಲಿ ವರ್ಗಾವಣೆ ನಿರ್ಬಂಧವನ್ನು ಘಟಕದೊಳಗಿನ ವರ್ಗಾವಣೆಗೆ ಅನ್ವಯಿಸಬಾರದು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಶಿಕ್ಷಣ ಇಲಾಖೆ ಉಪನಿರ್ದೇಶಕರ ಮೂಲಕ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದರು.

ವರ್ಗಾವಣೆಗಾಗಿ ಹಲವು ದಿನಗಳಿಂದ ಶಿಕ್ಷಕರು ಕಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶಿಕ್ಷಕರ ಹುದ್ದೆ ಖಾಲಿಯ ನೆಪದಲ್ಲಿ ವರ್ಗಾವಣೆಗೆ ನಿರ್ಬಂಧ ಹೇರಬಾರದು. ಖಾಲಿ ಇರುವ ಜಿಪಿಟಿ ಹುದ್ದೆಗಳು ಕೇವಲ ಹುದ್ದೆಗಳಾಗಿದ್ದು, ಬೋಧನೆಗೆ ಸಂಬಂಧಿಸಿದಂತೆ ಪಿಎಸ್‌ಟಿ ಶಿಕ್ಷಕರೇ ಜಿಪಿಟಿ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಪಿಎಸ್‌ಟಿ ಹುದ್ದೆ ಹಾಗೂ ಜಿಪಿಟಿ ಹುದ್ದೆಗಳಿಗೂ ವರ್ಗಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕೆಂದು ಮನವಿ ಪತ್ರದಲ್ಲಿ ಕೋರಿದ್ದಾರೆ.

1ರಿಂದ 5 ಮತ್ತು 6ರಿಂದ 8ನೇ ತರಗತಿ ಶಿಕ್ಷಕರ ವೃಂದಗಳನ್ನು ಸೇರಿಸಿ ಖಾಲಿ ಹುದ್ದೆಗಳನ್ನು ಪರಿಗಣಿಸುತ್ತಿದ್ದು, ವೃಂದ ಬಲದ ಆಧಾರದ ಮೇಲೆ 1ರಿಂದ 5 ವೃಂದಕ್ಕೆ ಸಂಬಂಧಿಸಿದಂತೆ ಖಾಲಿ ಹುದ್ದೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು. 6ರಿಂದ 8ನೇ ತರಗತಿ ವೃಂದಕ್ಕೆ ಪ್ರತ್ಯೇಕ ಖಾಲಿ ಹುದ್ದೆಗಳೆಂದು ಪರಿಗಣಿಬೇಕು ಎಂದು ಮನವಿ ಮಾಡಲಾಗಿದೆ.

ಸಂಘದ ಜಿಲ್ಲಾ ಅಧ್ಯಕ್ಷ ರಮೇಶ್, ಕಾರ್ಯದರ್ಶಿ ಗುಣಶೇಖರಯ್ಯ, ಗೌರವಾಧ್ಯಕ್ಷ ಕೆಂಪೇಗೌಡ, ರಾಮನಗರ ತಾಲೂಕು ಅಧ್ಯಕ್ಷ ಕಾಂತರಾಜು, ಪ್ರಧಾನ ಕಾರ್ಯದರ್ಶಿ ಪಿ. ವಾಸುದೇವ್, ಕನಕಪುರ ತಾಲೂಕು ಅಧ್ಯಕ್ಷ ಪ್ರಭಾಕರ್, ಮಾಗಡಿ ತಾಲೂಕು ಅಧ್ಯಕ್ಷ ಶಿವರಾಮಯ್ಯ, ಚನ್ನಪಟ್ಟಣ ತಾಲೂಕು ಅಧ್ಯಕ್ಷ ನಾಗೇಶ್, ಕಾರ್ಯದರ್ಶಿ ಕೃಷ್ಣಗೋಪಾಲ್ ಉಪಸ್ಥಿತರಿದ್ದರು.