ನ್ಯೂಸ್

ಸ್ವಯಂಸೇವಕ ಬೋಧಕರಿಗೆ ತರಬೇತಿ

Mysuru - Desk - Yashavanth Kumar N

ಹುಣಸೂರು: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಲೋಕ ಶಿಕ್ಷಣ ಸಮಿತಿ ಮತ್ತು ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ತಾಲೂಕಿನ ಕರಣಕುಪ್ಪೆ, ನೇರಳಕುಪ್ಪೆ, ಕಡೇಮನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 59 ಸ್ವಯಂ ಸೇವಕ ಬೋಧಕರಿಗೆ ತರಬೇತಿ ಕಾರ್ಯಾಗಾರ ನಡೆಸಲಾಯಿತು.

ಕಡಮನುಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಸಮನ್ವಯಾಧಿಕಾರಿ ಕೆ.ಸಂತೋಷ್‌ಕುಮಾರ್, ಕರಣಕುಪ್ಪೆ, ನೇರಳಕುಪ್ಪೆ ಮತ್ತು ಕಡೆಮನುಗನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಗುರುತಿಸಲ್ಪಟ್ಟಿರುವ 1302 ಅನಕ್ಷರಸ್ಥರನ್ನು ಮುಖ್ಯವಾಹಿನಿಗೆ ತರಲು ಜಿಲ್ಲಾ ಪಂಚಾಯಿತಿ ಲಿಂಕ್ ಅನುದಾನದಲ್ಲಿ 59 ಸ್ವಯಂಸೇವಕ ಬೋಧಕರಿಗೆ ತರಬೇತಿ ನೀಡಲಾಗುತ್ತಿದೆ. ಅನಕ್ಷರಸ್ಥರಿಗೆ ಕನಿಷ್ಠ ಸರಳ ಓದು, ಬರಹ, ಸಹಿ, ಲೆಕ್ಕಾಚಾರ ಕಲಿಸುವ ಮೂಲಕ ಮುಖ್ಯವಾಹಿನಿಗೆ ಸಾಕ್ಷರತಾ ಕಾರ್ಯಕ್ರಮದ ಮೂಲಕ ತರಲಾಗುವುದು ಎಂದು ಹೇಳಿದರು.

ಸ್ವಯಂ ಬೋಧಕರಿಗೆ ‘ಬಾಳಿಗೆ ಬೆಳಕು ಮತ್ತು ಸವಿಬರಹ’ ಕೈಪಿಡಿ ನೀಡಿ ಗ್ರಾಮದ ದೇವಸ್ಥಾನ, ಚಾವಡಿ, ಜಗುಲಿಕಟ್ಟೆ, ಸಮುದಾಯ ಭವನಗಳನ್ನು ಬಳಸಿಕೊಂಡು ಗ್ರಾಮದ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವಂತೆ ಮನವಿ ಮಾಡಿದರು.

ತರಬೇತಿ ಕಾರ್ಯಾಗಾರಕ್ಕೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶ್ರೀನಿವಾಸ, ಸಹಾಯಕರಾದ ದೊರೈಸ್ವಾಮಿ, ಲಲಿತಾ ಭೇಟಿ ನೀಡಿ ಸ್ವಯಂಬೋಧಕರ ಅನಿಸಿಕೆಗಳನ್ನು ಆಲಿಸಿ ಅಗತ್ಯ ಮಾರ್ಗದರ್ಶನ ನೀಡಿದರು. ಕಡೇಮನುಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳೇಗೌಡ,ವಯಸ್ಕರ ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳಾದ ಎಂ.ಬಿ.ನಂದೀಶ್ ಸಿ.ಎಸ್ ಮಹೇಶ್, ಸೋಮಶೇಖರ್, ಛಾಯಾ ಹಾಗೂ ಮುಖ್ಯ ಶಿಕ್ಷಕರಾದ ಸೀಮಾ,ಜಯಂತಿ, ಸಿ.ಆರ್.ಪಿ ಪ್ರಸನ್ನಕುಮಾರ್ ಉಪಸ್ಥಿತರಿದ್ದರು.