ನ್ಯೂಸ್

ವಿವಾದಿತ ಟ್ರೈನಿ ಐಎಎಸ್ ಪೂಜಾ ಖೇಡ್ಕರ್ ತಾಯಿ ಅರೆಸ್ಟ್​!

ಮುಂಬೈ: ಮಹಾರಾಷ್ಟ್ರದ ಟ್ರೈನಿ ಐಎಎಸ್ ಪೂಜಾ ಖೇಡ್ಕರ್ ತಾಯಿ ಮನೋರಮಾ ಖೇಡ್ಕರ್ ರನ್ನು ಪುಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಅಧಿಕಾರ ದುರುಪಯೋಗದಿಂದ ಸರ್ಕಾರದ ಆಕ್ರೋಶಕ್ಕೆ ಗುರಿಯಾಗಿರುವ ಪೂಜಾ ಖೇಡ್ಕರ್ ತಾಯಿ ಮನೋರಮಾ ಖೇಡ್ಕರ್ ರನ್ನು ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದ ಮೇಲೆ ಪುಣೆ ಪೊಲೀಸರು ಗುರುವಾರ(ಜು.18) ಬಂಧಿಸಿದ್ದಾರೆ.

ಪೂಜಾ ವಿರುದ್ಧ ಹಲವು ಆರೋಪಗಳು ಕೇಳಿಬರುತ್ತಿರುವ ಹೊತ್ತಿನಲ್ಲಿಯೇ ಪುಣೆಯ ಮುಲ್ಲಿ ತಹಸಿಲ್ ವ್ಯಾಪ್ತಿಯ ಧಡ್ವಾಲಿ ಗ್ರಾಮದಲ್ಲಿ ಜಮೀನು ವಿವಾದದಲ್ಲಿ ಮನೋರಮಾ ಗ್ರಾಮಸ್ಥರಿಗೆ ಪಿಸ್ತೂಲ್ ತೋರಿಸಿ ಬೆದರಿಸಿದ್ದರು. ಈ ಪ್ರಕರಣದಲ್ಲಿ ಖೇಡ್ಕರ್ ದಂಪತಿ ಹಾಗೂ ಇತರ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ವಿಚಾರಣೆಗೆ ಕರೆದರೂ ದಂಪತಿ ಹಾಜರಾಗಿರಲಿಲ್ಲ. ಕಡೆಗೆ ರಾಸ್‌ಗಢದ ಲಾಡ್ಜ್‌ನಲ್ಲಿ ಆಕೆಯನ್ನು ಬಂಧಿಸಲಾಯಿತು.

ಪೂಜಾ ಅವರ ತಂದೆ ದಿಲೀಪ್ ಖೇಡ್ಕರ್ ಅವರ ಮೇಲೂ ಭ್ರಷ್ಟಾಚಾರದ ಆರೋಪವಿದೆ. ಅವರು ಸರ್ಕಾರಿ ಅಧಿಕಾರಿಯಾಗಿದ್ದ ಅವಧಿಯಲ್ಲಿ ಎರಡು ಬಾರಿ ಅಮಾನತುಗೊಂಡಿದ್ದರು. ಇದೇ ವೇಳೆ ಹಲವು ವಿವಾದಗಳ ಕೇಂದ್ರ ಬಿಂದುವಾಗಿರುವ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಆಕೆಯ ತರಬೇತಿಯನ್ನು ಸ್ಥಗಿತಗೊಳಿಸಿ ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ಗೆ ಮರಳುವಂತೆ ಸೂಚಿಸಲಾಗಿದೆ.

ಪೂಜಾ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್​ಸಿ) ಗೆ ಸಲ್ಲಿಸಿದ ಪ್ರಮಾಣ ಪತ್ರಗಳಲ್ಲೂ ತಪ್ಪು ಮಾಹಿತಿ ನೀಡಿರುವುದು ಕಂಡು ಬಂದಿದ್ದು, ತನಿಖೆ ನಡೆಸಲಾಗುತ್ತಿದೆ.