ನ್ಯೂಸ್

ರಾಜ್ಯದ ಜನತೆಗೆ ರೈಲ್ವೇಯಿಂದ ಸಿಹಿಸುದ್ದಿ: ಇಲ್ಲೆಲ್ಲ ನಿಲ್ಲಲಿವೆ ಈ ರೈಲುಗಳು!

ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವಾಗ ಭರಪೂರ ಯೋಜನೆ-ಕೊಡುಗೆಗಳನ್ನು ನೀಡುತ್ತಿರುವ ಡಬಲ್ ಎಂಜಿನ್ ಸರ್ಕಾರ ಇದೀಗ ರಾಜ್ಯದ ಜನತೆಗೆ ಇನ್ನೊಂದು ಸೌಲಭ್ಯ ಒದಗಿಸಲು ಮುಂದಾಗಿದೆ. ಈ ಮೂಲಕ ರಾಜ್ಯದ ಅದರಲ್ಲೂ ಪ್ರಮುಖವಾಗಿ ಕರಾವಳಿ-ಮಲೆನಾಡಿನ ಜನರನ್ನು ಸಂತೋಷಪಡಿಸಲು ಮುಂದಾಗಿದೆ.

ಅಂದರೆ ಪ್ರಮುಖ ಕೆಲವು ರೈಲುಗಳನ್ನು ರಾಜ್ಯದ ಕೆಲವು ಆಯ್ದ ನಿಲ್ದಾಣಗಳಲ್ಲಿ ನಿಲುಗಡೆ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಪ್ರಾಯೋಗಿಕವಾಗಿ ಆರು ತಿಂಗಳ ಕಾಲ ಈ ಎಲ್ಲ ಪ್ರದೇಶಗಳಲ್ಲಿ ರೈಲು ನಿಲುಗಡೆ ನೀಡಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ರೈಲು ನಿಲುಗಡೆ ಆರಂಭವಾದ ಬಳಿಕ ಐದು ತಿಂಗಳ ವರೆಗೆ ಆಯಾ ನಿಲ್ದಾಣಗಳಲ್ಲಿನ ಟಿಕೆಟ್ ಮಾರಾಟದ ಮೇಲೆ ನಿಗಾ ಇರಿಸಲು ಸೂಚಿಸಲಾಗಿದ್ದು, ಅದರ ವಿವರವನ್ನು ಮುಂದಿನ ನಿರ್ಧಾರ ಕೈಗೊಳ್ಳುವ ಸಲುವಾಗಿ ಕಳುಹಿಸಿ ಕೊಡಬೇಕು ಎಂಬುದಾಗಿಯೂ ರೈಲ್ವೆ ಇಲಾಖೆ ಸೂಚನೆ ನೀಡಿದೆ. ಅಂದರೆ ಈ ನಿಲುಗಡೆಯಿಂದ ರೈಲ್ವೆ ಇಲಾಖೆಗೆ ಆದಾಯ ಬಂದರೆ ಅರ್ಥಾತ್ ಆಯಾ ಪ್ರದೇಶದ ಜನರು ಈ ಸೌಲಭ್ಯವನ್ನು ಉತ್ತಮವಾಗಿ ಬಳಸಿಕೊಂಡರೆ ಈ ನಿಲುಗಡೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ನಿಲುಗಡೆ ಲಭ್ಯ ಇರುವ ರೈಲು ಹಾಗೂ ನಿಲ್ದಾಣಗಳ ವಿವರ ಇಂತಿದೆ.

- 14805/06: ಯಶವಂತಪುರ-ಬಾರ್ಮರ್ ಎಕ್ಸ್​ಪ್ರೆಸ್​ (ಸಾಪ್ತಾಹಿಕ) ಮಾ.4ರಿಂದ ಬೀರೂರಿನಲ್ಲಿ ನಿಲುಗಡೆ ನೀಡಲಿದೆ.

- 17309/10: ಯಶವಂತಪುರ-ವಾಸ್ಕೋ ಡ ಗಾಮ ಎಕ್ಸ್​ಪ್ರೆಸ್​ ಮಾ.4ರಿಂದ ಕಡೂರಿನಲ್ಲಿ ನಿಲುಗಡೆ ನೀಡಲಿದೆ.

- 16345/46: ಲೋಕಮಾನ್ಯ ತಿಲಕ್ ತಿರುವನಂತಪುರ ನೇತ್ರಾವತಿ ಎಕ್ಸ್​ಪ್ರೆಸ್​ ಮಾ.4ರಿಂದ ಕುಂದಾಪುರದಲ್ಲಿ ನಿಲುಗಡೆ ನೀಡಲಿದೆ.

- 12619/20: ಲೋಕಮಾನ್ಯ ತಿಲಕ್ ಮಂಗಳೂರು ಮತ್ಸ್ಯಗಂಧ ಎಕ್ಸ್​ಪ್ರೆಸ್​ ಮಾ.4ರಿಂದ ಬಾರ್ಕೂರಿನಲ್ಲಿ ನಿಲುಗಡೆ ನೀಡಲಿದೆ.

- 16220: ತಿರುಪತಿ-ಚಾಮರಾಜನಗರ ಎಕ್ಸ್​ಪ್ರೆಸ್ ಮಾ.6ರಿಂದ ಕಾಮಸಮುದ್ರದಲ್ಲಿ ನಿಲುಗಡೆ ನೀಡಲಿದೆ.

- 17209/10: ಬೆಂಗಳೂರು-ಕಾಕಿನಾಡ ಶೇಷಾದ್ರಿ ಎಕ್ಸ್​ಪ್ರೆಸ್​ ಮಾ.6ರಿಂದ ಟ್ಯಾಕಲ್​ನಲ್ಲಿ ನಿಲುಗಡೆ ನೀಡಲಿದೆ.

- 22678: ಕೊಚುವೆಲಿ-ಯಶವಂತಪುರ ಎಕ್ಸ್​ಪ್ರೆಸ್​(ಸಾಪ್ತಾಹಿಕ) ಮಾ.4ರಿಂದ ಬಂಗಾರಪೇಟೆಯಲ್ಲಿ ನಿಲುಗಡೆ ನೀಡಲಿದೆ.

- 17303/04: ಹುಬ್ಬಳ್ಳಿ-ಕಾರಟಗಿ ಎಕ್ಸ್​ಪ್ರೆಸ್​ ಮಾ.7ರಿಂದ ಬನ್ನಿಕೊಪ್ಪದಲ್ಲಿ ನಿಲುಗಡೆ ನೀಡಲಿದೆ.

ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಭಾಗದ ಬಹುಜನರ ಬೇಡಿಕೆಯನ್ನು ಕೇಂದ್ರ ಸರ್ಕಾರದ ರೇಲ್ವೆ ಇಲಾಖೆ ಈಡೇರಿಸಿದೆ. ಈ ಕೆಳಗಿನ ರೈಲುಗಳ ನಿಲ್ದಾಣಕ್ಕೆ ಬಹುದಿನಗಳಿಂದ ಜನರ ಬೇಡಿಕೆಯಿದ್ದು, ಕೇಂದ್ರ ರೇಲ್ವೆ ಸಚಿವರೊಂದಿಗೆ ಪತ್ರ ಬರೆದು ಸಭೆ ನಡೆಸಿ ಮನವಿ ಮಾಡಿದ್ದೆ. ಮನವಿಗೆ ಸ್ಪಂದಿಸಿದ ರೇಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಯ ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸಂತೋಷ ವ್ಯಕ್ತಪಡಿಸಿದ್ದಾರೆ.