ನ್ಯೂಸ್

ಕಲಬುರಗಿ | ಪ್ರಯಾಣಿಕರನ್ನು ಬಿಟ್ಟು ಹೋದ ರೈಲು; ಕ್ಷಮೆ ಕೇಳಿದ ಸ್ಟೇಷನ್ ಮ್ಯಾನೇಜರ್

ಕಲಬುರಗಿ: ಹುಬ್ಬಳ್ಳಿ-ಸಿಕಂದರಾಬಾದ್ ರೈಲು ಭಾನುವಾರ ಬೆಳಗ್ಗೆ ಕಲಬುರಗಿ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರನ್ನು ಬಿಟ್ಟು ಮುಂದೆ ಸಾಗಿರುವ ಅಚಾತುರ್ಯ ನಡೆದಿದೆ. ರೈಲು ಪ್ಲಾಟ್​ಫಾರಂ ಸಂಖ್ಯೆ 1ರಲ್ಲಿ ಬರದೆ, ಮತ್ತೊಂದು ಪ್ಲಾಟ್‌ಫಾರಂನಲ್ಲಿ ಚಲಿಸಿರುವುದರಿಂದ ಈ ಘಟನೆ ನಡೆದಿದೆ. ಇದರಿಂದ ಸಾಕಷ್ಟು ಸಂಖ್ಯೆಯ ಪ್ರಯಾಣಿಕರು ಸಮಸ್ಯೆ ಅನುಭವಿಸುವಂತಾಯಿತು.

ಶನಿವಾರ ರಾತ್ರಿ ಹುಬ್ಬಳ್ಳಿಯಿಂದ ಹೊರಟಿದ್ದ ರೈಲು ಭಾನುವಾರ ಬೆಳಗ್ಗೆ 6.15ಕ್ಕೆ ಕಲಬುರಗಿ ರೈಲು ನಿಲ್ದಾಣಕ್ಕೆ ಬರಬೇಕಿತ್ತು. ಹೀಗಾಗಿ ಎಲ್ಲರೂ ಪ್ಲಾಟ್​ಫಾರಂ ಸಂಖ್ಯೆ 1ರಲ್ಲಿ ರೈಲಿಗಾಗಿ ಕಾದಿದ್ದರು. ಆದರೆ ರೈಲು ಮಾತ್ರ ಮತ್ತೊಂದು ಪ್ಲಾಟ್​ಫಾರಂನಲ್ಲಿ ಹಾದು ಹೋಗಿದ್ದು, ಎಲ್ಲರೂ ಪರದಾಡುವಂತಾಯಿತು.

ಪ್ಲಾಟ್ ಫಾರಂ ಸಂಖ್ಯೆ 1ರಲ್ಲಿ ಪ್ರಯಾಣಿಕರು ಕಾಯುತ್ತಿದ್ದ ವೇಳೆ ಹುಸೇನ್‌ ಸಾಗರ್ ರೈಲು ಬಂದಿದೆ. ಆಗ ಪ್ರಯಾಣಿಕರಿಗೆ ಹುಬ್ಬಳ್ಳಿ-ಸಿಕಂದರಾಬಾದ್ ರೈಲು ನಿಲ್ದಾಣ ದಾಟಿ ಹೋಗಿರುವುದು ತಿಳಿದು ಬಂದಿದೆ. ಈ ಬಗ್ಗೆ ಸಿಬ್ಬಂದಿ ಯಾವುದೇ ಮಾಹಿತಿ ನೀಡಿಲ್ಲ. ಇದರಿಂದ ಎಡವಟ್ಟು ಸಂಭವಿಸಿದೆ. ಕೂಡಲೇ ಪ್ರಯಾಣಿಕರು ರೈಲ್ವೆ ಸ್ಟೇಷನ್ ಮ್ಯಾನೇಜರ್‌ ಕಛೇರಿಗೆ ನುಗ್ಗಿ ವಾಗ್ವಾದ ನಡೆಸಿದರು. ಬಳಿಕ ಮ್ಯಾನೇಜರ್ ಎಲ್ಲರಲ್ಲಿಯೂ ಕ್ಷಮೆ ಕೇಳಿದರು.

ಘಟನೆ ಬಗ್ಗೆ ಕಲಬುರಗಿ ಸ್ಟೇಷನ್ ಮ್ಯಾನೇಜರ್ ಪಿ. ಎ. ನರಗುಂದಕರ್ ಪ್ರತಿಕ್ರಿಯಿಸಿ, ಸಿಬ್ಬಂದಿಗಳ ತಪ್ಪಿನಿಂದ ಎಲ್ಲರಿಗೂ ತೊಂದರೆಯಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಹುಬ್ಬಳ್ಳಿ-ಸಿಕಂದರಾಬಾದ್ ರೈಲಿನ ಪ್ರಯಾಣಿಕರನ್ನು ಹುಸೇನ್ ಸಾಗರ್ ರೈಲಿನಲ್ಲಿ ಪ್ರಯಾಣಿಸಲು ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ.